ಮೊರಾದಾಬಾದ್: ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳು ಅದ್ದೂರಿ ಆಚರಣೆಗಳಿಂದ ಗಮನ ಸೆಳೆಯುತ್ತಿವೆ. ವಧು-ವರರು ಐಷಾರಾಮಿ ಕಾರು, ಕುದುರೆ ಏರಿ ಬರುವಂತಹ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ವೈರಲ್ ಆಗುತ್ತವೆ. ಆದರೆ, ಇದಕ್ಕೆಲ್ಲಾ ವಿಭಿನ್ನವಾಗಿ, ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಮದುವೆಯೊಂದರಲ್ಲಿ ವರನೊಬ್ಬ ಜೆಸಿಬಿ ಯಂತ್ರ ಏರಿ, ಕೈಯಲ್ಲಿ ಸಿಗರೇಟ್ ಸೇದುತ್ತಾ ಅದ್ದೂರಿ ಎಂಟ್ರಿ ನೀಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡು ದಂಡ ವಿಧಿಸಿದ್ದಾರೆ.
ಉಮ್ರಿ ಕಲಾ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ, ವರ ಉಸ್ಮಾನ್ ಜೆಸಿಬಿ ಯಂತ್ರದ ಮುಂಭಾಗದ ಬಕೆಟ್ ಮೇಲೆ ಆಸನವೊಂದನ್ನು ಸಿದ್ಧಪಡಿಸಿಕೊಂಡು, ಅದರ ಮೇಲೆ ರಾಜನಂತೆ ಕುಳಿತು ಮದುವೆ ಹಾಲ್‌ಗೆ ಪ್ರವೇಶಿಸಿದ್ದಾನೆ. ಅಷ್ಟೇ ಅಲ್ಲದೆ, ಮತ್ತಷ್ಟು ಶೋಕಿ ಮಾಡುವ ಉದ್ದೇಶದಿಂದ ಸಾರ್ವಜನಿಕ ರಸ್ತೆಯಲ್ಲೇ ಕೈಯಲ್ಲಿ ಸಿಗರೇಟ್ ಹಿಡಿದು, ಹೊಗೆಯೂದುತ್ತಾ ಪೋಸ್ ನೀಡಿದ್ದಾನೆ. ಆತನ ಸಂಬಂಧಿಕರು ಕೂಡ ಚಲಿಸುತ್ತಿದ್ದ ಬುಲ್ಡೋಜರ್ ಮೇಲೆಯೇ ನಿಂತು ನೃತ್ಯ ಮಾಡಿದ್ದಾರೆ. ಈ ವಿಶಿಷ್ಟ ಮೆರವಣಿಗೆಯನ್ನು ನೋಡಲು ಬೀದಿಗಳಲ್ಲಿ ಜನರು ಜಮಾಯಿಸಿದ್ದರು.
ಈ ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮದುವೆ ಸಮಾರಂಭಗಳಲ್ಲಿ ಇಂತಹ ಅಜಾಗರೂಕ ನಡವಳಿಕೆಗಳು ಅನಗತ್ಯ ಎಂದು ಹಲವರು ಕಿಡಿಕಾರಿದ್ದಾರೆ. ವಿಡಿಯೋ ಅಧಿಕಾರಿಗಳ ಗಮನಕ್ಕೆ ಬಂದ ನಂತರ, ಸ್ಥಳೀಯ ಪೊಲೀಸರು ಮೆರವಣಿಗೆಯ ಸಮಯದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದ ಮೇಲೆ ವರನ ವಿರುದ್ಧ ದೂರು ದಾಖಲಿಸಿ, ಭಾರೀ ದಂಡ ವಿಧಿಸಿದ್ದಾರೆ.
PublicNext
13/06/2026 07:50 pm
LOADING...