ಚಿಕ್ಕಮಗಳೂರು: ಕಾಫಿನಾಡಿನ ರೈತರ ಬಹುದಿನಗಳ ಕನಸಾಗಿದ್ದ ಮಳಲೂರು ಏತ ನೀರಾವರಿ ಯೋಜನೆಗೆ ಕೊನೆಗೂ ಮರುಜೀವ ಬಂದಿದ್ದು, ರಾಜ್ಯ ಸರ್ಕಾರದಿಂದ 11ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ.
ಈ ಮಹತ್ವದ ಬೆಳವಣಿಗೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್, ಇಷ್ಟು ದಿನ ಸ್ಥಗಿತಗೊಂಡಿದ್ದ ಕಾಮಗಾರಿಗಳನ್ನು ಪುನರಾರಂಭಿಸಲು ಮತ್ತು ಬಾಣಾವರ ಹಾಗೂ ಗಂಜಲಗೋಡು ಸೇತುವೆ ಕಾಮಗಾರಿಗಳಿಗೆ ಚಾಲನೆ ನೀಡಲು ಈಗ ಹಾದಿ ಸುಗಮವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಮಳಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯ ರೈತರ ಪರವಾಗಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
ರೈತ ಸಂಘದ ನಿಯೋಗವು ಶಾಸಕರ ಮನೆಗೆ ಖುದ್ದಾಗಿ ಭೇಟಿ ನೀಡಿ ನಿರಂತರ ಒತ್ತಡ ಹೇರಿದ ಫಲವಾಗಿಯೇ ಇಂದು ಈ ಯೋಜನೆಗೆ ಮರುಚಾಲನೆ ದೊರೆತಿದೆ ಎಂದು ಮಹೇಶ್ ತಿಳಿಸಿದ್ದಾರೆ.
ಇನ್ನು ಈ ಯೋಜನೆಗೆ ಸುದೀರ್ಘ ಇತಿಹಾಸವಿದ್ದು, ಮಳಲೂರು ಜವರೇಗೌಡ, ಗುರುಶಾಂತಪ್ಪ, ಕೃಷ್ಣೇಗೌಡ ಹಾಗೂ ಎಂ.ಸಿ. ಬಸವರಾಜು ಅವರ ನೇತೃತ್ವದಲ್ಲಿ 1987 ರಲ್ಲೇ ರೈತರ ಹೋರಾಟ ಆರಂಭವಾಗಿತ್ತು.
ಈ ತೀವ್ರ ಹೋರಾಟದ ಪ್ರತಿಫಲವಾಗಿ ಯೋಜನೆಗೆ 1998ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತು, ಬಳಿಕ 2000 ನೇ ಇಸವಿಯಲ್ಲಿ ಶಂಕುಸ್ಥಾಪನೆ ನೆರವೇರಿತ್ತು. ಈಗ ಸಿಕ್ಕಿರುವ ಭಾರೀ ಅನುದಾನದಿಂದಾಗಿ ಜಿಲ್ಲೆಯ ರೈತರಲ್ಲಿ ಹೊಸ ಭರವಸೆ ಮೂಡಿದೆ.
PublicNext
14/06/2026 04:02 pm
LOADING...