ಚಿಕ್ಕಮಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಬುರುಡೆ ಪ್ರಕರಣವು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಕ್ಷೇತ್ರದ ವಿರುದ್ಧ ಅಪಪ್ರಚಾರ ಮತ್ತು ಬೃಹತ್ ಷಡ್ಯಂತ್ರ ರೂಪಿಸಲು ಬರೋಬ್ಬರಿ ಇನ್ನೂರು ಕೋಟಿ ರೂಪಾಯಿ ಹಣ ಬಳಕೆಯಾಗಿದೆ ಎನ್ನುವ ಮಾಹಿತಿಯೊಂದು ಈಗ ಬಯಲಾಗಿದೆ.
ಈ ಸ್ಫೋಟಕ ವಿದ್ಯಮಾನದ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದರ ಹಿಂದೆ ಅಂತರರಾಷ್ಟ್ರೀಯ ಮಟ್ಟದ ಹಾಗೂ ದೇಶವಿರೋಧಿ ಶಕ್ತಿಗಳ ಕೈವಾಡವಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ತಾವೇ ಇದನ್ನು ವ್ಯವಸ್ಥಿತ ಪಿತೂರಿ ಎಂದು ಹೇಳಿದಾಗ ಇಡೀ ವ್ಯವಸ್ಥೆ ತಮ್ಮ ಮೇಲೆ ಮುಗಿಬಿದ್ದಿತ್ತು ಎಂದು ನೆನಪಿಸಿಕೊಂಡ ಸಿ.ಟಿ. ರವಿ, ಈಗ ಕಾಲವೇ ಸತ್ಯವನ್ನು ಹೊರಹಾಕಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಸಾರ್ವಜನಿಕರಲ್ಲಿ ಅಪನಂಬಿಕೆ ಹುಟ್ಟಿಸುವುದು, ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಅವರ ಕುಟುಂಬದ ಗೌರವಕ್ಕೆ ಮಸಿ ಬಳಿಯುವುದೇ ಈ ದುಷ್ಟ ಕೂಟದ ಮುಖ್ಯ ಉದ್ದೇಶವಾಗಿತ್ತು ಎಂದು ಅವರು ದೂರಿದ್ದಾರೆ.
ನಕ್ಸಲರಿಗೆ ಬೆಂಬಲ ನೀಡುವ ಹಾಗೂ ಸಮಾಜದಲ್ಲಿ ಸದಾ ಅರಾಜಕತೆಯನ್ನೇ ಬಯಸುವ ನಟ ಪ್ರಕಾಶ್ ರಾಜ್ ಅಂತಹ ವ್ಯಕ್ತಿಗಳು ಈ ಸೂತ್ರದ ಪ್ರಮುಖ ಪಾಲುದಾರರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಇಂತಹವರನ್ನು ಪ್ರಚಾರಕ್ಕೆ ಬಳಸಿಕೊಂಡಿತ್ತು ಮತ್ತು ತಮ್ಮ ವಿರುದ್ಧ ಅಪಪ್ರಚಾರ ಮಾಡಲು ಪ್ರಕಾಶ್ ರಾಜ್ ಚಿಕ್ಕಮಗಳೂರಿಗೂ ಬಂದಿದ್ದರು ಎಂದು ಅವರು ಆಪಾದಿಸಿದ್ದಾರೆ.
ಈ ಬೃಹತ್ ಷಡ್ಯಂತ್ರದ ಮೂಲವನ್ನು ಪತ್ತೆಹಚ್ಚಲು ಸರ್ಕಾರಕ್ಕೆ ನಿಜವಾದ ಪ್ರಾಮಾಣಿಕತೆ ಇದ್ದರೆ, ತಕ್ಷಣವೇ ಸ್ವಯಂಪ್ರೇರಿತ (ಸೋಮೋಟೋ) ಮೊಕದ್ದಮೆ ದಾಖಲಿಸಿಕೊಂಡು ಸಂಬಂಧಪಟ್ಟ ಪ್ರಭಾವಿಗಳನ್ನು ಬಂಧಿಸಬೇಕು ಎಂದು ಸಿ.ಟಿ ರವಿ ಆಗ್ರಹಿಸಿದ್ದಾರೆ.
ವೀರೇಂದ್ರ ಹೆಗ್ಗಡೆಯವರ ಕುಟುಂಬದ ವಿರುದ್ಧ ದುರುದ್ದೇಶಪೂರ್ವಕ ಅಪಪ್ರಚಾರ ನಡೆಸಿದ ಅಸಲಿ ಮಾಸ್ಟರ್‌ಮೈಂಡ್ ಯಾರು ಮತ್ತು ಯಾವ ನಿಗೂಢ ಉದ್ದೇಶಕ್ಕಾಗಿ ಈ ಸಂಚು ರೂಪಿಸಲಾಯಿತು ಎಂಬುದರ ಕುರಿತು ಸಮಗ್ರ ತನಿಖೆಯಾಗಬೇಕು.
ಇಂತಹ ಕೃಪಾ ಪೋಷಿತ ನಾಟಕ ಮಂಡಳಿಗಳನ್ನು ಸಾಕಿ ಸಮಾಜದ ಶಾಂತಿ ಕದಡಲು ಬಿಡದೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸರ್ಕಾರ ಸತ್ಯವನ್ನು ಸಾರ್ವಜನಿಕರ ಮುಂದೆ ತರಬೇಕು ಎಂದು ಅವರು ಬಲವಾಗಿ ಒತ್ತಾಯಿಸಿದ್ದಾರೆ.
PublicNext
12/06/2026 05:24 pm