ಚಿಕ್ಕಮಗಳೂರು: ಮುಂಗಾರು ಮಳೆಯ ಸಣ್ಣನೆ ಹನಿಗಳು ಧರೆಗೆ ಇಳಿಯುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣವಾಗಿ ಹಸಿರು ಹೊದಿಕೆಯನ್ನು ಹೊದ್ದು ಪ್ರವಾಸಿಗರ ಸ್ವರ್ಗವಾಗಿ ಬದಲಾಗಿದೆ. ಕಾಫಿನಾಡಿನ ಕಡಿದಾದ ಬೆಟ್ಟಗುಡ್ಡಗಳು, ದಟ್ಟ ಅರಣ್ಯ ಮತ್ತು ಕಣ್ಣಾಡಿಸಿದಷ್ಟೂ ದೂರ ಕಂಗೊಳಿಸುವ ಹಸಿರಿನ ರಾಶಿ ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಈ ಸುಂದರ ಮಳೆಗಾಲದಲ್ಲಿ ಜಿಲ್ಲೆಯ ಪ್ರಮುಖ ಆಕರ್ಷಣೆಯಾಗಿರುವ ಗಿರಿ ಶಿಖರಗಳು, ಐತಿಹಾಸಿಕ ಸ್ಥಳಗಳು ಹಾಗೂ ಜಲಪಾತಗಳು ಸೃಷ್ಟಿಸಿರುವ ವೈಭವ ನಿಜಕ್ಕೂ ಕಣ್ಮನ ಸೆಳೆಯುವಂತಿದೆ.
ವಿಶ್ವದ ಎರಡನೇ ಸ್ವಿಜರ್ಲ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಕಾಫಿನಾಡಿನ ಸೌಂದರ್ಯವನ್ನು ಸವಿಯಲು ದೇಶ-ವಿದೇಶ, ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರು ಸುರಕ್ಷಿತವಾಗಿ ಬಂದು, ಅಷ್ಟೇ ಸುರಕ್ಷಿತವಾಗಿ ಮರಳಬೇಕೆಂಬುದು ಸ್ಥಳೀಯರ ಆಶಯವಾಗಿದೆ. ಮಳೆಗಾಲದ ಈ ಸಮಯದಲ್ಲಿ ಪ್ರವಾಸಿಗರ ಸುರಕ್ಷತೆ ಅತ್ಯಂತ ಮುಖ್ಯವಾಗಿದ್ದು ಜಲಪಾತ, ಇಳಿಜಾರಿನ ಪ್ರದೇಶಗಳ ವೀಕ್ಷಣೆಯ ವೇಳೆ ಕಡ್ಡಾಯವಾಗಿ ಸುರಕ್ಷತಾ ನಿಯಮಗಳನ್ನು ಪಾಲಿಸಿ ಅಪಾಯಕಾರಿ ಸ್ಥಳಗಳಲ್ಲಿ ನೀರಿಗೆ ಇಳಿಯಬಾರದು ಮತ್ತು ಪರಿಸರ ಮಾಲಿನ್ಯ ಮಾಡದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಾಯಾಮ ಪ್ರವಾಸಿಗರಲ್ಲಿ ಪ್ರವಾಸಿಗರಿಗೆ ಸೂಚನೆ ನೀಡಿದ್ದಾರೆ.
ಇನ್ನು ಮಲೆನಾಡು ಭಾಗದಲ್ಲಿ ಚಿರತೆ, ಹುಲಿ, ಆನೆ ಮುಂತಾದ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಈ ಪ್ರಾಣಿಗಳು ಸಾಮಾನ್ಯವಾಗಿ ಮನುಷ್ಯರ ಮೇಲೆ ನೇರವಾಗಿ ದಾಳಿ ಮಾಡುವುದಿಲ್ಲ. ಆದರೆ ಪ್ರವಾಸಿಗರು ಪ್ರಾಣಿಗಳಿಗೆ ತೊಂದರೆ ಕೊಡುವಂತಹ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಹಾಗೂ ಸ್ಥಳೀಯರು ಮತ್ತು ಪ್ರವಾಸಿಗರು ಪ್ರಾಣಿಗಳಿಗೆ ಯಾವುದೇ ಹಾನಿ ಮಾಡದಂತೆ ನಡೆದುಕೊಳ್ಳಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಹೊರಗಿನಿಂದ ಬರುವ ಕೆಲವು ಪ್ರವಾಸಿಗರು ಜಿಲ್ಲೆಯ ವಿವಿಧೆಡೆ ಗಾಂಜಾ ಸೇವನೆ, ಮದ್ಯಪಾನ ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಇದರಿಂದಾಗಿ ಪ್ರವಾಸಕ್ಕೆ ಬರುವ ಹೆಣ್ಣುಮಕ್ಕಳಿಗೆ ಸೂಕ್ತ ಸುರಕ್ಷತೆ ಇಲ್ಲದಂತಾಗಿದೆ. ಈ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ನಿಯಮ ಉಲ್ಲಂಘಿಸುವವರಿಗೆ ತಾಣಗಳಿಗೆ ಪ್ರವೇಶ ನೀಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಟ್ಟಾರೆ ಕಾಫಿನಾಡಿನ ಪ್ರಕೃತಿ ಸೌಂದರ್ಯವು ಹೇಗೆ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆಯೋ, ಅಷ್ಟೇ ಜವಾಬ್ದಾರಿಯುತ ವರ್ತನೆ ಪ್ರತಿಯೊಬ್ಬ ಪ್ರವಾಸಿಗನಿಂದಲೂ ನಿರೀಕ್ಷಿತವಾಗಿದೆ. ನಿಸರ್ಗದ ಮಡಿಲಲ್ಲಿ ಸಂತಸ ಪಡುವಾಗ ಕಾಡು ಪ್ರಾಣಿಗಳ ಸಹಬಾಳ್ವೆಗೆ ಧಕ್ಕೆ ತರದೇ, ಮಾದಕ ದ್ರವ್ಯಗಳಂತಹ ಅನೈತಿಕ ಚಟುವಟಿಕೆಗಳಿಂದ ದೂರವಿದ್ದು ಪ್ರವಾಸಿ ತಾಣಗಳ ಪವಿತ್ರತೆಯನ್ನು ಕಾಯ್ದುಕೊಳ್ಳಬೇಕಿದೆ. ಜಿಲ್ಲಾಡಳಿತದ ನಿಯಮಗಳನ್ನು ಗೌರವಿಸಿ, ಸುರಕ್ಷತೆಗೆ ಮೊದಲ ಆದ್ಯತೆ ನೀಡಿದಾಗ ಮಾತ್ರ ಕಾಫಿನಾಡಿನ ಮುಂಗಾರು ಪ್ರವಾಸ ಪ್ರತಿಯೊಬ್ಬರಲ್ಲೂ ಹಸಿರಾಗಿ ಉಳಿಯಲು ಸಾಧ್ಯ..
ಡ್ಯಾನಿ.. ಪಬ್ಲಿಕ್ ನೆಕ್ಸ್ಟ್, ಚಿಕ್ಕಮಗಳೂರು
PublicNext
14/06/2026 05:12 pm