ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕೋಟಿ ಕೋಟಿ ವೆಚ್ಚದಲ್ಲಿ ಸುಸಜ್ಜಿತ ನೂತನ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗಿದ್ದರೂ, ಅದರ ಉದ್ಘಾಟನೆ ಮತ್ತು ಸ್ಥಳಾಂತರ ಪ್ರಕ್ರಿಯೆ ತಡವಾಗುತ್ತಿರುವುದು ಸಾರ್ವಜನಿಕರು ಹಾಗೂ ವಕೀಲರ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಹೆಚ್ಚುವರಿ ನ್ಯಾಯಾಲಯಗಳ ಅಗತ್ಯವಿದ್ದ ಹಿನ್ನೆಲೆಯಲ್ಲಿ ಈಗಿನ ಹಳೆಯ ಕಟ್ಟಡದ ಮೇಲೆಯೇ ಹೊಸ ಮಹಡಿಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ತಾಂತ್ರಿಕ ವರದಿಯಲ್ಲಿ ಹಳೆಯ ಕಟ್ಟಡದ ಅಡಿಪಾಯ ಹಾಗೂ ಮಣ್ಣಿನ ಸ್ಥಿರತೆ ಗಟ್ಟಿಯಾಗಿಲ್ಲ ಎಂದು ತಿಳಿದುಬಂದಿದ್ದರಿಂದ, ಸ್ಥಳವನ್ನು ಬದಲಾಯಿಸಿ ಎಐಟಿ ಕಾಲೇಜಿನ ಮೇಲ್ಭಾಗದ ಗುಡ್ಡ ಪ್ರದೇಶದಲ್ಲಿ ಬೃಹತ್ ನೂತನ ನ್ಯಾಯಾಲಯ ಸಮುಚ್ಚಯವನ್ನು ನಿರ್ಮಿಸಲಾಯಿತು.
ಸುಮಾರು 100 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಂತ ಹಂತವಾಗಿ ಆರು ಅಂತಸ್ತುಗಳ ಭವ್ಯ ಕಟ್ಟಡದ ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ.
ಆದರೆ ಕಟ್ಟಡ ಪೂರ್ಣಗೊಂಡರೂ ಸಮರ್ಪಕ ರಸ್ತೆ ಸಂಪರ್ಕ, ಪೇವರ್ಸ್ ಅಳವಡಿಕೆ ಮತ್ತು ವಕೀಲರ ಸಂಚಾರಕ್ಕೆ ಫುಟ್‌ಬ್ರಿಡ್ಜ್‌ನಂತಹ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಉದ್ಘಾಟನೆ ನೆನೆಗುದಿಗೆ ಬಿದ್ದಿತ್ತು.
ಈ ಹಿನ್ನೆಲೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಸರ್ಕಾರದ ಗಮನ ಸೆಳೆದು, ವಿವಿಧ ಹಂತಗಳಲ್ಲಿ ಅನುದಾನವನ್ನು ತಂದು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ.
ಇತ್ತೀಚೆಗಷ್ಟೇ ಲಭ್ಯವಾದ ಮತ್ತೊಂದು 2.5ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನದ ಮೂಲಕ ಬಾಕಿ ಇದ್ದ ಎಲ್ಲಾ ಕೆಲಸಗಳನ್ನು ಮುಗಿಸಿ, ನೂತನ ನ್ಯಾಯಾಲಯವನ್ನು ಈಗ ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ.
ಮೂಲಭೂತ ಸೌಕರ್ಯಗಳ ಕೆಲಸ ಮುಗಿದಿದ್ದರೂ ಅಧಿಕೃತ ಉದ್ಘಾಟನೆಯ ದಿನಾಂಕ ಇನ್ನು ನಿಗದಿಯಾಗಿಲ್ಲ. ಪ್ರಸ್ತುತ ಬಳಕೆಯಲ್ಲಿರುವ ಹಳೆಯ ಕಟ್ಟಡವು ತೀರಾ ಜೀರ್ಣಾವಸ್ಥೆ ತಲುಪಿದ್ದು, ಮೇಲ್ಛಾವಣಿಯ ಸಿಮೆಂಟ್ ಆಗಾಗ ಕಳಚಿ ಬೀಳುತ್ತಿದೆ ಮತ್ತು ಒಳಗಿನ ಕಬ್ಬಿಣದ ರಾಡುಗಳು ಸಂಪೂರ್ಣವಾಗಿ ತುಕ್ಕು ಹಿಡಿದಿರುವುದರಿಂದ ಅಲ್ಲಿ ಮುಂದುವರಿಯುವುದು ಜೀವಕ್ಕೆ ಅಪಾಯಕಾರಿಯಾಗಿದೆ.
ಆದ್ದರಿಂದ ಮುಖ್ಯಮಂತ್ರಿಗಳು ಅಥವಾ ಹಿರಿಯ ಸಚಿವರು ಬರುವ ಅಧಿಕೃತ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಯುತ್ತಾ ಕೂರದೆ, ಜೀವಹಾನಿ ತಡೆಯುವ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಕಲಾಪಗಳನ್ನು ತಕ್ಷಣವೇ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ವಕೀಲರ ಸಂಘದ ಪ್ರಮುಖರು ಕಳಕಳಿಯ ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ, ಭವ್ಯವಾದ ನೂತನ ನ್ಯಾಯಾಲಯದ ಎಲ್ಲ ಮೂಲಭೂತ ಸೌಕರ್ಯಗಳ ಕೆಲಸಗಳು ಈಗ ಸಂಪೂರ್ಣವಾಗಿ ಮುಗಿದು ಸಜ್ಜಾಗಿ ನಿಂತಿದೆ.
ಹಳೇ ಕಟ್ಟಡದ ಮೇಲ್ಛಾವಣಿ ಯಾವಾಗ ಉದುರಿ ಬೀಳುತ್ತದೋ ಎಂಬ ಜೀವಭಯದಲ್ಲಿ ದಿನದೂಡುತ್ತಿರುವ ವಕೀಲರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ, ಅಧಿಕೃತ ಉದ್ಘಾಟನೆಯ ರಿಬ್ಬನ್ ಕತ್ತರಿಸುವ ಕಾರ್ಯಕ್ರಮಕ್ಕೆ ಕಾಯದೇ ತಕ್ಷಣವೇ ಕಲಾಪಗಳನ್ನು ಇಲ್ಲಿಗೆ ಸ್ಥಳಾಂತರಿಸುವುದೊಂದೇ ಸದ್ಯಕ್ಕಿರುವ ಜಾಣತನದ ನಡೆಯಾಗಿದೆ.
ಡ್ಯಾನಿ.. ಪಬ್ಲಿಕ್ ನೆಕ್ಸ್ಟ್.. ಚಿಕ್ಕಮಗಳೂರು
PublicNext
13/06/2026 01:20 pm