ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಉರುಳಿಗೆ ಸಿಲುಕಿ ಸಾವು-ಬದುಕಿನ ನಡುವೆ ಹುಲಿಯ ಹೋರಾಟ

ಚಿಕ್ಕಮಗಳೂರು: ಮುತ್ತೋಡಿ ವಲಯದ ಏಳುನೂರುಖಾನ್ ತೋಟದ ಬಳಿ ತಂತಿ ಉರುಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿರುವ ಹುಲಿಯೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

ಹುಲಿಯ ಹೊಟ್ಟೆಯ ಭಾಗಕ್ಕೆ ತಂತಿ ಉರುಳು ಸುತ್ತಿಕೊಂಡಿರುವುದು ಸ್ವಯಂಚಾಲಿತ ಕ್ಯಾಮೆರಾ ಟ್ರಾಪ್‌ನಲ್ಲಿ ಸೆರೆಯಾಗಿದ್ದು, ಉರುಳು ಬಿಗಿಯಾಗಿ ಪ್ರಾಣಿಯ ಜೀವಕ್ಕೆ ಭಾರೀ ಅಪಾಯ ಎದುರಾಗಿದೆ. ಕಡವೆ ಮತ್ತು ಜಿಂಕೆಯನ್ನು ಬೇಟೆಯಾಡಿದ ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಿ ನಿಗಾ ಇರಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಕಳೆದ ಮೂರು ದಿನಗಳಿಂದ ಹುಲಿ ಪತ್ತೆಗಾಗಿ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ತೋಟದ ಕಾರ್ಮಿಕರು ಹಾಗೂ ಸ್ಥಳೀಯರಿಗೆ ಕೆಲಸಕ್ಕೆ ತೆರಳದಂತೆ ಸೂಚನೆ ನೀಡಲಾಗಿದ್ದು, ಪಂಡರವಳ್ಳಿ ಮತ್ತು ಕೊಳಗಾವೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಈ ಘಟನೆಯು ಸಾರ್ವಜನಿಕರು ಹಾಗೂ ಪ್ರಾಣಿ ಪ್ರಿಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವನ್ಯಜೀವಿಗಳಿಗೆ ಉರುಳು ಹಾಕಿದ ಆರೋಪಿಗಳ ವಿರುದ್ಧ ಅರಣ್ಯ ಇಲಾಖೆ ಇದುವರೆಗೆ ಯಾವುದೇ ಅಧಿಕೃತ ಪ್ರಕರಣ ದಾಖಲಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಭಾಗದಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ಕಳ್ಳಬೇಟೆಯನ್ನು ತಡೆಯುವಲ್ಲಿ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಇನ್ನು ಏಳುನೂರುಖಾನ್ ಕಾಫಿ ಎಸ್ಟೇಟ್ ಕೆ.ಜೆ.ಜಾರ್ಜ್ ಅವರಿಗೆ ಸೇರಿದ್ದಾಗಿದ್ದು, ಇದರ ಸುತ್ತಮುತ್ತ ಅನೇಕ ಪ್ರಭಾವಿ ರಾಜಕೀಯ ನಾಯಕರು ತೋಟಗಳನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು, ನಿಖರವಾಗಿ ಯಾವ ಕಾಫಿ ಎಸ್ಟೇಟ್‌ನಲ್ಲಿ ಹುಲಿಗೆ ಉರುಳು ಬಿದ್ದಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಗಾಯಗೊಂಡಿರುವ ಹುಲಿಯನ್ನು ಕೂಡಲೇ ಪತ್ತೆ ಹಚ್ಚಿ ರಕ್ಷಿಸುವಂತೆ ಹಾಗೂ ಕಳ್ಳಬೇಟೆಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ತೀವ್ರ ಆಗ್ರಹ ಕೇಳಿಬರುತ್ತಿದೆ.

Edited By : Vijay Kumar
Kshetra Samachara

Kshetra Samachara

13/06/2026 03:08 pm

Cinque Terre

960

Cinque Terre

0

ಸಂಬಂಧಿತ ಸುದ್ದಿ