ಕಾರು ಲೋನ್ ಬಾಕಿ ವಸೂಲಾತಿಗಾಗಿ ಹೋಗಿದ್ದ ಬೆಂಗಳೂರಿನ ಕಾರ್ ಚಾಲಕ ಯಶ್ವಂತ್ ಎಂಬ ಯುವಕನು ಗೂಡ್ಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿರುವ ದುರದೃಷ್ಟಕರ ಘಟನೆ ಸಕ್ಕರಾಯಪಟ್ಟಣ ಠಾಣಾ ವ್ಯಾಪ್ತಿಯ ಹಿರೇಗೌಜ ಗೇಟ್ ಬಳಿ ಸಂಭವಿಸಿದೆ.
ಹಾಸನ ವಿಜಯನಗರ ಬಡಾವಣೆಯ ನಿವಾಸಿ ರೂಪಾ ಎಂಬುವರ ಪುತ್ರ ಯಶ್ವಂತ್ ಬೆಂಗಳೂರಿನಲ್ಲಿ ಕಾರ್ ಡ್ರೈವಿಂಗ್ ಕೆಲಸ ಮಾಡುತ್ತಿದ್ದನು. ತಾನು ಈ ಹಿಂದೆ ಅಜ್ಜಂಪುರದ ವ್ಯಕ್ತಿಯೊಬ್ಬರಿಗೆ ನೀಡಿದ್ದ ಕಾರಿನ ಲೋನ್ ಮೊತ್ತವನ್ನು ಅವರು ಎರಡು ತಿಂಗಳಿನಿಂದ ಪಾವತಿಸದ ಕಾರಣ, ಆ ಕಾರನ್ನು ವಾಪಸ್ ತರಲು ಅಜ್ಜಂಪುರಕ್ಕೆ ಹೋಗುತ್ತಿರುವುದಾಗಿ ತಾಯಿಗೆ ತಿಳಿಸಿದ್ದನು.
ತಡರಾತ್ರಿ ಬಸ್ ಇಲ್ಲದ ಕಾರಣ ಸಖರಾಯಪಟ್ಟಣದ ನಯರಾ ಪೆಟ್ರೋಲ್ ಬಂಕ್ ಬಳಿ ಆತ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕೆಎ-17 ಎಎ-1694 ನಂಬರಿನ ಮಹೀಂದ್ರ ಜಿತೋ ಗೂಡ್ಸ್ ವಾಹನವು ಯಶ್ವಂತನಿಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಡಿಕ್ಕಿ ಹೊಡೆದಿದೆ. ಅಪಘಾತದಿಂದ ತೀವ್ರ ರಕ್ತಸ್ರಾವ ಗೊಂಡಿದ್ದ ಆತನನ್ನು ಅಂಬುಲೆನ್ಸ್ ಚಾಲಕ ವಿನಯ್ ಅವರು ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಿಸದೆ ಯಶ್ವಂತ್ ಕೊನೆಯುಸಿರೆಳೆದಿದ್ದಾನೆ. ಮೃತನ ತಾಯಿ ರೂಪಾ ನೀಡಿದ ದೂರಿನ ಮೇರೆಗೆ ಜಿತೋ ವಾಹನದ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
Kshetra Samachara
15/06/2026 10:10 am
LOADING...