ಹುಬ್ಬಳ್ಳಿ: ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಕೈಗೊಂಡ ಫ್ಲೈ ಓವರ್ ಕಾಮಗಾರಿ ಮುಗೀತಿಲ್ಲ. ಹುಬ್ಬಳ್ಳಿ ಜನತೆಗೆ ಗೋಳು ತಪ್ತಿಲ್ಲ. ಚೆನ್ನಮ್ಮ ವೃತ್ತದಲ್ಲಿ ಅಡ್ಡಾಡೋದೇ ದುಸ್ತರ ಎನ್ನುವಂತಾಗಿದೆ. ಚೆನ್ನಮ್ಮ ವೃತ್ತದಲ್ಲಿ ಮೊಳಕಾಲೆತ್ತರಕ್ಕೆ ತಗ್ಗುಗುಂಡಿಗಳು ಬಿದ್ದಿವೆ. ಮಳೆ ಬಂದರೆ ಚೆನ್ನಮ್ಮ ವೃತ್ತ ರಾಡಿ..ರಾಡಿ.. ರಸ್ತೆಯಲ್ಲಿ ಬೀಳೋದು.. ಏಳೋದು ಸಾಮಾನ್ಯ ಎನ್ನುವಂತಾಗಿದೆ.
ಬೈಕ್ ಸವಾರರು ಸಂಚರಿಸೋದೇ ದುಸ್ತರವಾಗಿದೆ. ಇತರೆ ವಾಹನ ಸವಾರರೂ ಹರಸಾಹಸಪಡುವಂತಾಗಿದೆ. ಹೇಳೋರಿಲ್ಲ.. ಕೇಳೋರಿಲ್ಲ ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಫ್ಲೈಓವರ್ ಕಾಮಗಾರಿ ಚೆನ್ನಮ್ಮ ವೃತ್ತದ ಅಂದ ಕೆಡಿಸಿದೆ. ತನ್ನದೇ ಆದ ಮಹತ್ವ ಪಡೆದುಕೊಂಡಿದ್ದ ಚೆನ್ನಮ್ಮ ವೃತ್ತಕ್ಕೆ ಗರ ಬಡಿದಂತಾಗಿದೆ. ವಾಹನ ಸಂಚಾರದ ಕೇಂದ್ರಬಿಂದುವಾಗಿರೋ ಚೆನ್ನಮ್ಮ ವೃತ್ತದಲ್ಲಿ ಕಾಮಗಾರಿ ಆರಂಭಗೊಂಡು ಮೂರು ವರ್ಷವಾದ್ರೂ ಮುಗೀತಿಲ್ಲ.
ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಫ್ಲೈ ಓವರ್ ನೆಪದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯವೂ ನಡೀತಿಲ್ಲ. ಗುಂಡಿ ಮುಚ್ಚೋ ಭಾಗ್ಯ ಸಿಗದೆ ಜನ ಹೈರಾಣಾಗಿದ್ದಾರೆ. ಫ್ಲೈಓವರ್ ಕಾಮಗಾರಿ ವಿಳಂಬ ವಾಗುತ್ತಲೇ ಸಾಗಿದೆ. ಇನ್ನೂ ವರ್ಷವಾದರೂ ಮುಗಿಯೋ ಲಕ್ಷಣ ಕಾಣ್ತಿಲ್ಲ. ಇದರಿಂದಾಗಿ ವಾಣಿಜ್ಯ ನಗರಿ ಜನತೆಗೆ ನೆಮ್ಮದಿ ಸಿಗ್ತಿಲ್ಲ. ಲೋಕೋಪಯೋಗಿ ಇಲಾಖೆ, ಪಾಲಿಕೆಗೆ ಜನತೆ ಹಿಡಿಶಾಪ ಹಾಕ್ತಿದೆ. ಆದಷ್ಟು ಬೇಗ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳಿಸಿ. ವಿಳಂಬವಾದಲ್ಲಿ ಕೆಳಗಿನ ರಸ್ತೆಗಳನ್ನಾದ್ರೂ ದುರಸ್ತಿ ಮಾಡಿ. ಕೊನೆಗೆ ರಸ್ತೆಯಲ್ಲಿ ಬಿದ್ದಿರೋ ತಗ್ಗು ಗುಂಡಿಯನ್ನಾದ್ರೂ ಮುಚ್ಚಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜನತೆ ಒತ್ತಾಯಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/06/2026 01:02 pm