ಪುತ್ತೂರು: ಮೆಸ್ಕಾಂನ 3 ಜಿಲ್ಲೆಗಳು ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ವಿದ್ಯುತ್ ಇಲಾಖೆಯನ್ನು ಕರ್ನಾಟಕದಲ್ಲಿ ಖಾಸಗೀಕರಣಗೊಳಿಸುವುದರ ವಿರುದ್ಧ ಜೂ.16ರಂದು ಬನ್ನೂರಿನಲ್ಲಿರುವ ಮೆಸ್ಕಾಂನ ಪುತ್ತೂರು ವಿಭಾಗದ ಕಚೇರಿಯಲ್ಲಿ ಮೆಸ್ಕಾಂನ ಅಧಿಕಾರಿ ಹಾಗೂ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಈಗಾಗಲೇ ಕರ್ನಾಟಕದಲ್ಲಿ ಪ್ರಾರಂಭಗೊಂಡಿದೆ. ಟಾಟಾ ಕಂಪನಿಯವರು ಖಾಸಗಿಗೆ ಅರ್ಜಿ ಹಾಕಿದ್ದಾರೆ. ಖಾಸಗಿಯವರಿಗೆ ನೀಡಬೇಕಾದರೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸಾರ್ವಜನಿಕರ ಅಭಿಪ್ರಾಯ, ಆಕ್ಷೇಪಣೆಗಳನ್ನು ಪಡೆಯಬೇಕು. ಆಕ್ಷೇಪಣೆಗಳನ್ನು ಸಲ್ಲಿಸಲು ಜೂ.23ರ ತನಕ ಅವಕಾಶವಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಖಾಸಗೀಕರಣಗೊಂಡರೆ ಕೃಷಿ, ಕೈಗಾರಿಕೆ, ಗುತ್ತಿಗೆದಾರರು ಸಹಿತ ಎಲ್ಲಾ ವರ್ಗದವರಿಗೂ ಪರಿಣಾಮ ಬೀಳಲಿದೆ. ಹೀಗಾಗಿ ಪ್ರತಿ ನಾಗರಿಕರು ಆಕ್ಷೇಪಣೆಗಳನ್ನು ಸಲ್ಲಿಸುವ ಮೂಲಕ ಖಾಸಗೀಕರಣದಿಂದ ಸಂಭವಿಸಬಹುದಾದ ಹೊಡೆತ, ಸಮಸ್ಯೆಗಳನ್ನು ತಡೆಯುವಂತೆ ಪ್ರತಿಭಟನೆಯಲ್ಲಿ ಆಗ್ರಹ ವ್ಯಕ್ತವಾಯಿತು.
ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಡಿಪ್ಲೊಮಾ ಇಂಜಿನಿಯರ್ಸ್ ಎಸೋಸಿಯೇಶನ್ ರಾಜ್ಯಾಧ್ಯಕ್ಷರಾಗಿರುವ ರಾಮಚಂದ್ರ ಎ. ಮಾತನಾಡಿ, ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ.
ವಿದ್ಯುತ್ ಇಲಾಖೆ ಖಾಸಗೀಕರಣಗೊಂಡರೆ ಬಿಎಸ್‌ಎನ್‌ಎಲ್‌ನ ಪರಿಸ್ಥಿತಿ ಎದುರಿಸಬೇಕಾಗಬಹುದು. ಅಧಿಕ ಜನಸಂಖ್ಯೆ ಆದಾಯ ಬರುವ ಪ್ರಮುಖ ನಗರಗಳನ್ನು ಏರ್‌ಟೆಲ್, ಜಿಯೋದಂತಹ ಖಾಸಗಿ ಕಂಪನಿಗಳು ಪಡೆದುಕೊಂಡಿದೆ. ಆದಾಯ ಇಲ್ಲದೇ ಇರುವ ಗ್ರಾಮೀಣ ಪ್ರದೇಶಗಳು ಸರಕಾರಿ ಸಂಸ್ಥೆಗಳ ಕೈಯಲ್ಲಿದ್ದು ಅಲ್ಲಿ ಸಮಸ್ಯೆ ನಿಭಾಯಿಸಲು ಅಸಾಧ್ಯವಾಗಿದೆ. ಮುಂದೆ ಮೆಸ್ಕಾಂನ ಸ್ಥಿತಿಯೂ ಇದೇ ರೀತಿಯಾಗುವ ಸಾಧ್ಯತೆಯಿದೆ. ಟಾಟಾ ಸಂಸ್ಥೆಯ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ, ಉಡುಪಿ, ಶಿವಮೊಗ್ಗ ನಗರ ಮಾತ್ರ ಖಾಸಗೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಸುಳ್ಯ, ನೆಲ್ಯಾಡಿ ಪುತ್ತೂರನ್ನು ಅವರು ಬಿಟ್ಟಿದ್ದಾರೆ. ದೊಡ್ಡ ನಗರಗಳಲ್ಲಿ ಬೃಹತ್ ಕೈಗಾರಿಕೆಗಳು, ಅಪಾರ್ಟ್ ಮೆಂಟ್‌ಗಳಿದ್ದು ಅಲ್ಲಿ ದೊಡ್ಡ ಮಟ್ಟದ ಆದಾಯ ಬರುತ್ತದೆ. ಖಾಸಗಿಯವರು ಸ್ವಂತ ಲಾಭಕ್ಕಾಗಿ ಮಾತ್ರ ಮಾಡುತ್ತಾರೆಯೇ ವಿನಃ ಸಾರ್ವಜನಿಕ ಹಿತಾಸಕ್ತಿ ನೋಡಲು ಸಾಧ್ಯವಿಲ್ಲ ಎಂದರು.
PublicNext
15/06/2026 06:29 pm