ಉಡುಪಿ; ಸಂಕಷ್ಟದಲ್ಲಿರುವವರ ಬದುಕಿಗೆ ಹೊಸ ಆಶಾಕಿರಣವಾಗಿರುವ ಅಕ್ಕ ಪಡೆ ಮತ್ತೊಂದು ಸಾರ್ಥಕ ಕಾರ್ಯದ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹಲವು ವರ್ಷಗಳಿಂದ ಮನೆ ಬಿಟ್ಟು ಬಂದಿದ್ದ ಹಾಗೂ ಜೀವನೋಪಾಯವಿಲ್ಲದೆ ಅಲೆದಾಡುತ್ತಿದ್ದ ಮಹಿಳೆಯೊಬ್ಬಳಿಗೆ ವಸತಿ ಮತ್ತು ಉದ್ಯೋಗ ವ್ಯವಸ್ಥೆ ಕಲ್ಪಿಸುವ ಮೂಲಕ ಅಕ್ಕ ಪಡೆ ಮಾನವೀಯತೆ ಮೆರೆದಿದೆ.
ಶ್ರೀ ಕೃಷ್ಣ ಮಠದ ಪರಿಸರದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದ ಮಹಿಳೆಯ ಬಗ್ಗೆ ಸ್ಥಳೀಯರಿಂದ ಅಕ್ಕ ಪಡೆಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ತೆರಳಿದ ಅಕ್ಕ ಪಡೆ ಸದಸ್ಯರು ಮಹಿಳೆಯೊಂದಿಗೆ ಮಾತನಾಡಿ ಆಕೆಯ ಪರಿಸ್ಥಿತಿಯನ್ನು ತಿಳಿದುಕೊಂಡರು. ಈ ವೇಳೆ ಮಹಿಳೆ ತಾನು ಶ್ರೀ ಕೃಷ್ಣನ ಸೇವೆ ಮಾಡಬೇಕು, ಇಲ್ಲಿಯೇ ಇರಲು ಬಯಸುತ್ತೇನೆ ಎಂದು ತಿಳಿಸಿದ್ದಾಳೆ. ಆದರೆ ಆಕೆಗೆ ಶಾಶ್ವತ ವಾಸಸ್ಥಳವೂ ಇರಲಿಲ್ಲ, ಉದ್ಯೋಗವೂ ಇರಲಿಲ್ಲ. ಕುಟುಂಬದ ಬಗ್ಗೆ ಅಥವಾ ಮನೆಯ ವಿಳಾಸದ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಕೂಡ ಸಾಧ್ಯವಾಗುತ್ತಿರಲಿಲ್ಲ.
ಮಹಿಳೆಯ ಸ್ಥಿತಿಯನ್ನು ಮನಗಂಡ ಅಕ್ಕ ಪಡೆ ಸದಸ್ಯರು ಶ್ರೀ ಕೃಷ್ಣ ಮಠದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಆಕೆಗೆ ಸೂಕ್ತವಾದ ಉದ್ಯೋಗ ವ್ಯವಸ್ಥೆ ಕಲ್ಪಿಸುವಲ್ಲಿ ಯಶಸ್ವಿಯಾದರು. ಜೊತೆಗೆ ವಾಸಿಸಲು ಸ್ಥಳದ ವ್ಯವಸ್ಥೆಯನ್ನೂ ಮಾಡಿಕೊಟ್ಟರು.
ಉದ್ಯೋಗ ಮತ್ತು ವಸತಿ ದೊರೆತ ನಂತರ ಮಹಿಳೆ ವ್ಯಕ್ತಪಡಿಸಿದ ಸಂತೋಷ ಹಾಗೂ ಕೃತಜ್ಞತೆ ಅಕ್ಕ ಪಡೆ ಸದಸ್ಯರಿಗೂ ಅಪಾರ ಸಂತಸ ತಂದಿತು. ಸಮಾಜದ ಅಂಚಿನಲ್ಲಿರುವ ವ್ಯಕ್ತಿಗಳಿಗೆ ನೆರವಾಗಿ ಅವರ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ಅಕ್ಕ ಪಡೆಯ ಈ ಕಾರ್ಯ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.
PublicNext
15/06/2026 06:51 pm
LOADING...