ಚಿತ್ರದುರ್ಗ: ಸಿರಿಗೆರೆ ಸಮೀಪದ ಜಮ್ಮೇನಹಳ್ಳಿ ಗ್ರಾಮದ ರೈತ ಆರ್.ಬಿ. ಪರಮೇಶ್ವರಪ್ಪ ಅವರ ತೋಟದಲ್ಲಿ ಬೆಳೆಸಲಾಗಿದ್ದ ಸುಮಾರು 1,500 ಅಡಿಕೆ ಸಸಿಗಳನ್ನು ಕಿಡಿಗೇಡಿಗಳು ರಾತ್ರಿ ವೇಳೆ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ರೈತ ಆರ್.ಬಿ. ಪರಮೇಶ್ವರಪ್ಪ ಅವರು ತಮ್ಮ ತೋಟದಲ್ಲಿ ಅಡಿಕೆ ಬೆಳೆಯ ಉದ್ದೇಶದಿಂದ ಪಾಕೆಟ್‌ಗಳಲ್ಲಿ ಸುಮಾರು 1,500 ಅಡಿಕೆ ಸಸಿಗಳನ್ನು ಸಿದ್ಧಪಡಿಸಿ ಇಟ್ಟಿದ್ದರು. ಆದರೆ ಗುರುವಾರ ರಾತ್ರಿ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ ಸಸಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಬೆಳಿಗ್ಗೆ ತೋಟಕ್ಕೆ ತೆರಳಿದ ವೇಳೆ ಸಸಿಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ತಿಳಿದುಬಂದಿದೆ. ಈ ಕೃತ್ಯದಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಅಪರಾಧಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೃಷಿ ಉತ್ಪನ್ನಗಳು, ಕೃಷಿ ಪರಿಕರಗಳು ಹಾಗೂ ತೋಟಗಾರಿಕಾ ಸಸಿಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಜಮ್ಮೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸುವಂತೆ ರೈತರು ಒತ್ತಾಯಿಸಿದ್ದಾರೆ. ಈ ಸಂಬಂಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರು ಘಟನೆಯನ್ನು ಖಂಡಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದಾರೆ.
Kshetra Samachara
16/06/2026 01:21 pm
LOADING...