ಖಾನಾಪುರ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಾದ್ಯಂತ ಬಾರ್ ಹಾಗೂ ವೈನ್‌ಶಾಪ್‌ಗಳು ನಿಗದಿತ ಸಮಯಕ್ಕೂ ಮುನ್ನವೇ ಬಾಗಿಲು ತೆರೆದು ಕಾರ್ಯನಿರ್ವಹಿಸುತ್ತಿದ್ದರೂ ಸಂಬಂಧಪಟ್ಟ ಅಬಕಾರಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕರ್ನಾಟಕ ಅಬಕಾರಿ ನಿಯಮಾವಳಿಗಳ ಪ್ರಕಾರ CL-9 ಹಾಗೂ C-2 ಪರವಾನಗಿ ಹೊಂದಿರುವ ಬಾರ್ ಮತ್ತು ಮದ್ಯ ಮಾರಾಟ ಮಳಿಗೆಗಳು ನಿಗದಿತ ಸಮಯದೊಳಗೆ ಮಾತ್ರ ಕಾರ್ಯನಿರ್ವಹಿಸಬೇಕು. ಆದರೆ ಖಾನಾಪುರ ತಾಲೂಕಿನ ಹಲವೆಡೆ ಬೆಳಿಗ್ಗೆ 8 ಗಂಟೆಯಿಂದಲೇ ಬಾರ್‌ಗಳು ಹಾಗೂ ವೈನ್‌ಶಾಪ್‌ಗಳು ತೆರೆದು ವ್ಯಾಪಾರ ನಡೆಸುತ್ತಿರುವ ಆರೋಪ ಕೇಳಿಬಂದಿದೆ.
ಇದರಿಂದ ದಿನಗೂಲಿ ಕಾರ್ಮಿಕರು ಕೆಲಸಕ್ಕೆ ತೆರಳುವ ಬದಲು ಬೆಳಗ್ಗೆಯೇ ಮದ್ಯ ಸೇವನೆಗೆ ಮುಂದಾಗುತ್ತಿರುವುದು ಕಂಡುಬರುತ್ತಿದೆ.
ಪರಿಣಾಮವಾಗಿ ಅನೇಕ ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಹದಗೆಡುತ್ತಿದ್ದು, ಕುಟುಂಬ ನಿರ್ವಹಣೆಯ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಇದಲ್ಲದೆ ಶಾಲೆ ಹಾಗೂ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಕುಡುಕರ ಕಾಟದಿಂದ ತೊಂದರೆ ಅನುಭವಿಸುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಅಹಿತಕರ ವಾತಾವರಣ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.
ಖಾನಾಪುರ ಅಬಕಾರಿ ಇಲಾಖೆಯ ಕಚೇರಿಯಲ್ಲಿ ಅಬಕಾರಿ ನಿರೀಕ್ಷಕರ ಕುರ್ಚಿ ಬಹುತೇಕ ಸಮಯ ಖಾಲಿಯಾಗಿರುತ್ತದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಸಿಬ್ಬಂದಿಯನ್ನು ಪ್ರಶ್ನಿಸಿದರೆ “ಸಾಹೇಬರು ಸ್ಥಳ ಪರಿಶೀಲನೆ, ಸಭೆ ಅಥವಾ ಅಧಿಕೃತ ಕಾರ್ಯದಲ್ಲಿ ನಿರತರಾಗಿದ್ದಾರೆ” ಎಂಬ ಉತ್ತರ ದೊರೆಯುತ್ತದೆ.
ಆದರೆ ಅಬಕಾರಿ ನಿರೀಕ್ಷಕರು ಕಚೇರಿಗೆ ಅನಿಯಮಿತವಾಗಿ ಬರುತ್ತಾರೆ ಎಂಬುದು ಸ್ಥಳೀಯರ ವಾದವಾಗಿದೆ.
ತಾಲೂಕಿನಾದ್ಯಂತ ಮದ್ಯ ಮಾರಾಟ ಮಳಿಗೆಗಳ ಸಮಯ ಉಲ್ಲಂಘನೆ ಬಗ್ಗೆ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರ ದೂರಿಗೆ ಸ್ಪಂದಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ನಾಗೇಶ್ ನಾಯ್ಕರ್ ಪಬ್ಲಿಕ್ ನೆಕ್ಸ್ಟ್ ಖಾನಾಪುರ
PublicNext
16/06/2026 08:53 pm