ಚಿಕ್ಕಮಗಳೂರು: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಇತ್ತೀಚೆಗೆ ಹುಲಿಯೊಂದು ಉರುಳಿಗೆ ಬಿದ್ದ ಪ್ರಕರಣ ಬೆನ್ನಲ್ಲೇ ಇದೀಗ ಮತ್ತೆರಡು ಹುಲಿಗಳು ಪತ್ತೆಯಾಗುವ ಮೂಲಕ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಏಳುನೂರುಖಾನ್ ಎಸ್ಟೇಟ್ ಬಳಿ ನಿಗಾ ಇರಿಸಲು ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಈ ಎರಡು ಹುಲಿಗಳ ಚಲನವಲನಗಳು ಸ್ಪಷ್ಟವಾಗಿ ಸೆರೆಯಾಗಿವೆ. ಕಳೆದ ಶುಕ್ರವಾರ ಸಚಿವ ಕೆ.ಜೆ. ಜಾರ್ಜ್ ಅವರ ತೋಟದ ಸಮೀಪವೇ ಸೊಂಟದಲ್ಲಿ ಉರುಳು ಸಿಲುಕಿಸಿಕೊಂಡು ಓಡಾಡುತ್ತಿದ್ದ ಹುಲಿ ಮಾತ್ರ ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಕ್ಕಿಲ್ಲ, ಹಾಗೂ ಈ ಕ್ಯಾಮೆರಾಗಳಲ್ಲೂ ಸೆರೆಯಾಗಿಲ್ಲ. ಇದರಿಂದಾಗಿ ಮುಳ್ಳಯ್ಯನಗಿರಿ ತಪ್ಪಲಿನ ಈ ಭಾಗದಲ್ಲಿ ಎರಡಲ್ಲ, ಒಟ್ಟು ಮೂರು ಹುಲಿಗಳು ಮುಕ್ತವಾಗಿ ಸಂಚರಿಸುತ್ತಿವೆ ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ.
ಗಾಯಗೊಂಡಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯು ಈಗಾಗಲೇ ಬೋನ್ ಹಾಗೂ ಹೆಚ್ಚುವರಿ ಕ್ಯಾಮೆರಾಗಳನ್ನು ಅಳವಡಿಸಿ ಜಾಲ ಬೀಸಿದ್ದರೂ, ಈಗ ಬೇರೆ ಹುಲಿಗಳು ಕಾಣಿಸಿಕೊಂಡಿರುವುದು ಇಲಾಖೆಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸುತ್ತಮುತ್ತಲಿನ ತೋಟಗಳಲ್ಲಿ ಹುಲಿಗಳ ಉಪಟಳ ಹೆಚ್ಚಾಗಿರುವುದರಿಂದ, ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಲು ಸ್ಥಳೀಯ ಕಾರ್ಮಿಕರು ಮತ್ತು ಗ್ರಾಮಸ್ಥರು ತೀವ್ರ ಭೀತಿಯಿಂದ ಹಿಂದೇಟು ಹಾಕುತ್ತಿದ್ದಾರೆ.
PublicNext
17/06/2026 07:44 am
LOADING...