ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿಂಡಹಳ್ಳಿ ಕೆರೆ ಬಳಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೀತಿಸಿ ಮದುವೆಯಾಗಿದ್ದ ಪತಿಯೇ ತನ್ನ ಪತ್ನಿಯ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ 21 ವರ್ಷದ ಯೋಗಿನಿ ಕೊಲೆಯಾದ ದುರ್ದೈವಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಆವಲಹಳ್ಳಿ ಮೂಲದ ಗಣೇಶ್ ಕೊಲೆ ಮಾಡಿದ ಆರೋಪಿ.
ಕೊಲೆಯಾದ ಯೋಗಿನಿ ಮತ್ತು ಆರೋಪಿ ಗಣೇಶ್ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಯೋಗಿನಿ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ, ಗಣೇಶ್ ತನ್ನ ಪತ್ನಿ ಯೋಗಿನಿ ಮೇಲೆ ಸಂಶಯಪಟ್ಟು ಪದೇ ಪದೇ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದೇ ದ್ವೇಷದಿಂದ ಗಣೇಶ್ ಚಾಕುವಿನಿಂದ ಯೋಗಿನಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾನೆ. ಈ ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಗಣೇಶ್‌ನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
PublicNext
17/06/2026 11:31 am
LOADING...