ಕೋಲಾರ: ಕೋಲಾರದಲ್ಲಿ ವರದಕ್ಷಿಣೆ ಹೆಮ್ಮಾರಿ ತನ್ನ ಕ್ರೂರ ಮುಖವನ್ನು ಅನಾವರಣಗೊಳಿಸಿದೆ. ಪತಿಯೇ ತನ್ನ ಹೆಂಡತಿಯನ್ನು ಪ್ರೆಶರ್ ಕುಕ್ಕರ್‌ನಿಂದ ಹೊಡೆದು ಕೊಲೆ ಮಾಡಿ, ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ದೊಡ್ಡಹಾಸಲ ಗ್ರಾಮದ ನಿವಾಸಿ ಸಹನಾ (24) ಮೃತಪಟ್ಟ ದುರ್ದೈವಿ. ಮನೆಯಲ್ಲಿ ಸಹನಾ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ, ಇದು ಆತ್ಮಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಮೃತಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಅವರ ದೂರಿನ ಪ್ರಕಾರ, ಪತಿ ಮಂಜುನಾಥ್ ವರದಕ್ಷಿಣೆಗಾಗಿ ಸದಾ ಕಿರುಕುಳ ನೀಡುತ್ತಿದ್ದ. ಘಟನೆ ನಡೆದ ದಿನ, ಸಹನಾ ಅವರ ತಲೆಗೆ ಪ್ರೆಶರ್ ಕುಕ್ಕರ್‌ನಿಂದ ಬಲವಾಗಿ ಹೊಡೆದಿದ್ದು, ಹೊಡೆತದ ರಭಸಕ್ಕೆ ಸಹನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪರಾಧವನ್ನು ಮುಚ್ಚಿಹಾಕಲು, ಮಂಜುನಾಥ್ ಶವವನ್ನು ಫ್ಯಾನ್‌ಗೆ ತೂಗುಹಾಕಿ ಆತ್ಮಹತ್ಯೆಯ ನಾಟಕವಾಡಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.
ಈ ಭೀಕರ ಕೃತ್ಯಕ್ಕೆ ಮಂಜುನಾಥ್‌ನ ತಾಯಿ ಯಶೋದಮ್ಮ ಮತ್ತು ಸಹೋದರ ಸುನಿಲ್ ಕೂಡ ಸಾಥ್ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ, ಪ್ರಮುಖ ಆರೋಪಿ ಪತಿ ಮಂಜುನಾಥ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
PublicNext
19/06/2026 04:20 pm
LOADING...