ಉಡುಪಿ: ಆಧುನಿಕ ಯುಗದಲ್ಲಿ ಯಾಂತ್ರೀಕರಣದತ್ತ ಕೃಷಿ ಸಾಗುತ್ತಿರುವ ಸಂದರ್ಭದಲ್ಲಿ, ಉಡುಪಿ ಜಿಲ್ಲೆಯ ಹುತ್ಕಾಡಿ ಗ್ರಾಮದ ಜೋಲಿ ಅವರು ಸುಮಾರು 125 ವರ್ಷಗಳ ಕುಟುಂಬದ ಕೃಷಿ ಪರಂಪರೆಯನ್ನು ಇಂದಿಗೂ ಜೀವಂತವಾಗಿಟ್ಟಿದ್ದಾರೆ.
ಕಾನೂನು ಪದವೀಧರೆಯಾಗಿರುವ ಜೋಲಿ ಅವರು ವಿವಿಧ ಸಂಸ್ಥೆಗಳಲ್ಲಿ ಅರೆಕಾಲಿಕ ಸೇವೆ ಸಲ್ಲಿಸುತ್ತಿದ್ದರೂ, ಕುಟುಂಬದ ಅಜ್ಜ-ತಂದೆಯ ಕಾಲದಿಂದ ನಡೆದು ಬಂದ ಕೃಷಿಯನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಇಂದಿಗೂ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದು, ಕೋಣಗಳಿಂದ ಉಳುಮೆ, ಕೂಲಿ ಕಾರ್ಮಿಕರ ಮೂಲಕ ನಾಟಿ ಹಾಗೂ ಕಟಾವು ಕಾರ್ಯಗಳನ್ನು ನಡೆಸುತ್ತಿದ್ದಾರೆ.
ಗಣೇಶ ಚತುರ್ಥಿ, ಕನ್ಯಾಮರಿಯಮ್ಮನ ಜನ್ಮೋತ್ಸವ, ನವರಾತ್ರಿ ಮತ್ತು ಅನಂತ ವ್ರತದಂತಹ ಹಬ್ಬಗಳ ಸಂದರ್ಭದಲ್ಲಿ ದೇವಸ್ಥಾನಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಕದಿರುಗಳನ್ನು ಒದಗಿಸುವುದು ಇವರ ಕೃಷಿಯ ವಿಶೇಷತೆ.
ಹಬ್ಬಗಳ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಮೇ ತಿಂಗಳಲ್ಲೇ ಬತ್ತದ ಸಸಿಗಳನ್ನು ಸಿದ್ಧಪಡಿಸಿ, ಜೂನ್ ಮೊದಲ ವಾರದಲ್ಲೇ ನಾಟಿ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ.
ಆದರೆ ಈ ಕೃಷಿ ಸುಲಭದ ಕೆಲಸವಲ್ಲ. ಬೆಟ್ಟ ಪ್ರದೇಶವಾಗಿರುವುದರಿಂದ ನೀರಿನ ಕೊರತೆ ದೊಡ್ಡ ಸವಾಲಾಗಿದೆ. ಜೊತೆಗೆ ಬೀದಿ ನಾಯಿಗಳು ಗದ್ದೆಗಳಲ್ಲಿ ಓಡಾಡಿ ನಾಟಿ ಮಾಡಿದ ಬೆಳೆಗಳನ್ನು ಹಾನಿಗೊಳಿಸುತ್ತಿವೆ. ತೆನೆ ಬರುವ ಸಮಯದಲ್ಲಿ ನವಿಲುಗಳು, ಗುಬ್ಬಚ್ಚಿಗಳು, ಪಾರಿವಾಳಗಳು ಸೇರಿದಂತೆ ಹಲವು ಪಕ್ಷಿಗಳು ಬೆಳೆ ನಾಶ ಮಾಡುತ್ತಿರುವುದು ರೈತರಿಗೆ ಹೆಚ್ಚುವರಿ ತೊಂದರೆಯಾಗಿದೆ.
ಇಷ್ಟೆಲ್ಲ ಸವಾಲುಗಳ ನಡುವೆಯೂ, ಹಬ್ಬಗಳ ಸಂಪ್ರದಾಯ ಉಳಿಯಬೇಕು ಎಂಬ ಉದ್ದೇಶದಿಂದ ಜೋಲಿ ಅವರು ತಮ್ಮ ಕುಟುಂಬದ ಕೃಷಿ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
"ಕೃಷಿ ನಮ್ಮ ಜೀವನ, ಸಂಪ್ರದಾಯ ನಮ್ಮ ಹೆಮ್ಮೆ. ಎಷ್ಟೇ ಕಷ್ಟಗಳಿದ್ದರೂ ಮುಂದಿನ ಪೀಳಿಗೆಗೂ ಈ ಪರಂಪರೆಯನ್ನು ಉಳಿಸಬೇಕು ಎಂಬುದು ನಮ್ಮ ಸಂಕಲ್ಪ," ಎಂದು ಜೋಲಿ ತಿಳಿಸಿದ್ದಾರೆ.
PublicNext
17/06/2026 08:48 pm