ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹೈವೇ ಬಂತು ರಸ್ತೆ ಹೋಯ್ತು- ಈ ಊರ ಮಂದಿಗೆ ರಸ್ತೆಯಿಲ್ಲದೆ ಪರದಾಟ

ಮಂಗಳೂರು: ಯಾವುದೇ ಊರ ಸಮೀಪ ಹೈವೇ‌ ಬಂತೆಂದರೆ ಆ ಊರು, ಅಲ್ಲಿನ ರಸ್ತೆ ಅಭಿವೃದ್ಧಿ ಆಯಿತೆಂದೇ ಲೆಕ್ಕ . ಆದರೆ ಈ ಊರಿಗೆ ಮಾತ್ರ ಹೈವೇ ಬಂದದ್ದೇ ಕಂಟಕವಾಯ್ತು. ನೂರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯಿರುವ ಇಲ್ಲಿನ ರಸ್ತೆ ಹೈವೇಯಿಂದಾಗಿ ಸಂಪೂರ್ಣ ಬಂದ್ ಆಗಿದೆ.

ಬಿಕರ್ನಕಟ್ಟೆ - ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಮಂಗಳೂರಿನ ಹೊರವಲಯದ ಗುರುಪುರ‌ ಬಂಡಸಾಲೆಯ ಕಾರಮೊಗರು ಎಂಬ ಊರನ್ನು ಹಾದು ಹೋಗುತ್ತದೆ‌. ರಾಷ್ಟ್ರೀಯ ಹೆದ್ದಾರಿಯು ಈ ಊರಿನ ರಸ್ತೆಯ ಮೇಲ್ಗಡೆಯೇ ಹಾದು ಹೋಗಿದೆ. ಪರಿಣಾಮ ಈ ಊರಿನವರಿಗೆ ಸಂಪರ್ಕ ರಸ್ತೆಯೇ ಇಲ್ಲದಂತಾಗಿದೆ. ಈ ಊರ ರಸ್ತೆಗೆ ಅಬ್ಬಕ್ಕ ರಾಣಿಯ ಕಾಲದ ಇತಿಹಾಸವಿದೆ. ಇದೀಗ ಈ ರಸ್ತೆ ಇಲ್ಲದೆ ಇಲ್ಲಿನ ಜನತೆ ಐದು ನಿಮಿಷದಲ್ಲಿ ಕ್ರಮಿಸಬೇಕಾದ ರಸ್ತೆಗೆ ಆರೇಳು ಕಿ.ಮೀ. ಸುತ್ತಿ ಬಳಸಿ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ಊರಿನಲ್ಲಿ ಹತ್ತಾರು ಮನೆಗಳಿದ್ದು, ಒಂದಷ್ಟು ಕುಟುಂಬಗಳು ವಾಸಿಸುತ್ತಿದೆ. ಹಿರಿಯರು, ಮಕ್ಕಳು ಸೇರಿ 50ರಷ್ಟು ಮಂದಿ ಇಲ್ಲಿ ವಾಸಿಸುತ್ತಿದ್ದಾರೆ. ರಸ್ತೆಯಿಲ್ಲದೆ ಮಕ್ಕಳು ಶಾಲೆ ಕಾಲೇಜುಗಳಿಗೆ ಹೋಗಲು ಪಾಡುಪಟ್ಟರೆ, ವೃದ್ಧರು ಅನಾರೋಗ್ಯ ತೊಂದರೆಗೊಳಗಾದ ಅವರನ್ನು ಎತ್ತಿಕೊಂಡೇ ಹೋಗುವ ಸ್ಥಿತಿಯಿದೆ. ಮನೆಗೆ ಸಣ್ಣ ವಸ್ತುವಿನ ಅಗತ್ಯ ಬಿದ್ದಾಗಲೂ ಆರೇಳು ಕಿ.ಮೀ. ಕ್ರಮಿಸಬೇಕಾದ ಅನಿವಾರ್ಯತೆಯಿದೆ.

ಕಾರಮೊಗರು ಊರಿನಲ್ಲಿ ಎರಡು ದೇವಸ್ಥಾನಗಳು, ಒಂದು ದೈವಸ್ಥಾನವಿದ್ದು, ಹತ್ತಿರದ ವೆಂಕಟರಮಣ ದೇವಸ್ಥಾನದ ಜಾತ್ರೋತ್ಸವದ ಬಳಿಕ ದೇವರ ಅವಭೃತೋತ್ಸವಕ್ಕೆ ಇದೇ ಮಾರ್ಗವನ್ನು ಅವಲಂಬಿಸಲಾಗುತ್ತಿತ್ತು‌. ಜೊತೆಗೆ ದೈವಸ್ಥಾನವೊಂದರ ಮಾರಿ ಓಡಿಸುವುದು ಇದೇ ರಸ್ತೆಯಲ್ಲಾಗುತ್ತಿತ್ತು. ಆದರೆ ಈ ರಸ್ತೆ ಇಲ್ಲದೆ ಧಾರ್ಮಿಕ ಕಾರ್ಯಕ್ರಮಗಳಿಗೂ ತೊಂದರೆಯಾಗಿದೆ.

ಹೈವೇ ಆಗುವಾಗಲೇ ಊರಿನವರು ಈ ಬಗ್ಗೆ ಎನ್‌ಎಚ್‌ಎಐ ಅಧಿಕಾರಿಗಳ ಗಮನ ಸೆಳೆದಿದ್ದರು. ಆಗ ಅಧಿಕಾರಿಗಳು ಅಂಡರ್‌ಪಾಸ್ ಮಾಡಿಕೊಡುತ್ತೇವೆ. ತಮ್ಮ ಸಂಪರ್ಕ ರಸ್ತೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು‌. ಆದರೆ ಆ ಬಳಿಕ ಪಕ್ಕದಲ್ಲೇ ಇರುವ ಪ್ರಭಾವಿತ ವ್ಯಕ್ತಿಯೊಬ್ಬರು ನದಿ ದಂಡೆಯಲ್ಲಿರುವ ಎಸ್ಇಝಡ್‌ ವ್ಯಾಪ್ತಿಗೆ ಒಳಪಟ್ಟ ಭೂಮಿಯನ್ನು ಕಬಳಿಸಲು ದಾಖಲೆಯಲ್ಲಿರುವ ಪರಂಬೋಕು ರಸ್ತೆಯನ್ನೇ ತನ್ನ ಪ್ರಭಾವ ಬಳಸಿ ಮುಚ್ಚಿದ್ದಾರೆ‌. ಆದ್ದರಿಂದ ಅಂಡರ್‌ಪಾಸ್ ಇದ್ದರೂ ಅದು ಮುಚ್ಚಲ್ಪಟ್ಟು ಜನರಿಗೆ ರಸ್ತೆಯೇ ಇಲ್ಲದಂತಾಗಿದೆ. ಕಳೆದ ಎರಡು ವರ್ಷಗಳಿಂದ ಈ ಊರಿನ ಜನರು ಈ ರಸ್ತೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಎನ್ಎಚ್ಎಐ ಅಧಿಕಾರಿಗಳು, ತಹಶೀಲ್ದಾರ್, ಸಹಾಯಕ ಆಯುಕ್ತರು, ಸಂಸದರು ಸೇರಿ ಎಲ್ಲರಲ್ಲೂ ಹೋಗಿ ರಸ್ತೆಗಾಗಿ ಮನವಿ ಮಾಡಿದರೂ ಯಾವ ಪ್ರಯೋಜನವೂ ಆಗಿಲ್ಲ. ಈ ಬಡಪಾಯಿ ಜನರ ಸಂಕಷ್ಟಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರ ಒದಗಿಸಲೇಬೇಕಿದೆ.

Edited By :
PublicNext

PublicNext

18/06/2026 08:11 am

Cinque Terre

15.78 K

Cinque Terre

0

ಸಂಬಂಧಿತ ಸುದ್ದಿ