ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರಸಭೆ ವಾಹನ ಡಿಕ್ಕಿ - ಬೀದಿ ನಾಯಿಗೆ ಗಂಭೀರ ಗಾಯ, 30 ಸಾವಿರ ಪರಿಹಾರಕ್ಕೆ ನೋಟಿಸ್

ಉಡುಪಿ : ಉಡುಪಿ ನಗರದ ಕುಂಜಿಬೆಟ್ಟು ಪ್ರದೇಶದಲ್ಲಿ ಉಡುಪಿ ನಗರಸಭೆಗೆ ಸೇರಿದ ವಾಹನವೊಂದು ಬೀದಿ ನಾಯಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ತೆರಳಿದ ಘಟನೆಗೆ ಸಂಬಂಧಿಸಿ ನಗರಸಭೆಗೆ ಕಾನೂನು ನೋಟಿಸ್ ನೀಡಲಾಗಿದೆ.

ಪ್ರಾಣಿಹಕ್ಕುಗಳ ವಕೀಲೆ ಹಾಗೂ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್‌ನ ಬಬಿತಾ ರಾಜ್ ಅವರು ನಗರಸಭೆ ಆಯುಕ್ತರಿಗೆ ಸಲ್ಲಿಸಿರುವ ನೋಟಿಸ್‌ನಲ್ಲಿ, ಜೂನ್ 16ರಂದು ಬೆಳಿಗ್ಗೆ 7.45ರಿಂದ 8 ಗಂಟೆಯ ನಡುವಿನ ಅವಧಿಯಲ್ಲಿ ನಗರಸಭೆಯ ಅಧಿಕೃತ ವಾಹನವು ಯುವ ಸಮುದಾಯದ ನಾಯಿಗೆ ಡಿಕ್ಕಿ ಹೊಡೆದಿದ್ದು, ಚಾಲಕ ಗಾಯಗೊಂಡ ಪ್ರಾಣಿಗೆ ಯಾವುದೇ ನೆರವು ನೀಡದೆ ಸ್ಥಳದಿಂದ ತೆರಳಿದ್ದಾನೆ ಎಂದು ಆರೋಪಿಸಿದ್ದಾರೆ.

ಡಿಕ್ಕಿಯ ಪರಿಣಾಮ ನಾಯಿ ರಸ್ತೆಯಲ್ಲೇ ರಕ್ತಸ್ರಾವದಿಂದ ನರಳುತ್ತಿದ್ದು, ಸಾರ್ವಜನಿಕರ ಮಾಹಿತಿಯ ಮೇರೆಗೆ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ತುರ್ತು ಚಿಕಿತ್ಸೆಗೆ ದಾಖಲಿಸಿದೆ. ಮೊದಲು ಡಾ. ಪ್ರಶಾಂತ್ ಅವರ ಬಳಿ ಪ್ರಾಥಮಿಕ ಚಿಕಿತ್ಸೆ, ನಂತರ ಎಕ್ಸ್-ರೇ ಪರೀಕ್ಷೆಗಾಗಿ ಸಮನ್ವಯ ಕೇಂದ್ರಕ್ಕೆ ಹಾಗೂ ಬಳಿಕ ಡಾ. ವಾಸುದೇವ ಪೈ ಅವರ ಬಳಿ ಶಸ್ತ್ರಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

ವೈದ್ಯಕೀಯ ಪರೀಕ್ಷೆಯಲ್ಲಿ ನಾಯಿಗೆ ನಾಲ್ಕು ಕಡೆ ಮೂಳೆ ಮುರಿತ ಉಂಟಾಗಿರುವುದು ಪತ್ತೆಯಾಗಿದ್ದು, ಬಾಲದ ಮೂಳೆ ಗಂಭೀರವಾಗಿ ಹಾನಿಗೊಳಗಾದ ಕಾರಣ ಬಾಲವನ್ನು ಕತ್ತರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅತಿಯಾದ ರಕ್ತಸ್ರಾವದಿಂದ ರಕ್ತ ವರ್ಗಾವಣೆ (ಬ್ಲಡ್ ಟ್ರಾನ್ಸ್‌ಫ್ಯೂಷನ್) ಕೂಡ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಈ ಘಟನೆ ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 134 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಸೆಕ್ಷನ್ 11(1)(ಎ) ಉಲ್ಲಂಘನೆಯಾಗಿದ್ದು, ಗಾಯಗೊಂಡ ಪ್ರಾಣಿಗೆ ನೆರವು ನೀಡದೇ ಸ್ಥಳದಿಂದ ತೆರಳಿರುವುದು ಗಂಭೀರ ಅಪರಾಧವಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಬೀದಿ ನಾಯಿಗಳ ರಕ್ಷಣೆ ಹಾಗೂ ನಿರ್ವಹಣೆ ನಗರಸಭೆಯ ಕಾನೂನುಬದ್ಧ ಜವಾಬ್ದಾರಿಯಾಗಿದ್ದು, ನಗರಸಭೆಯ ವಾಹನವೇ ಇಂತಹ ಕೃತ್ಯ ಎಸಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಬಬಿತಾ ರಾಜ್ ಹೇಳಿದ್ದಾರೆ.

ಗಾಯಗೊಂಡ ನಾಯಿಯ ಚಿಕಿತ್ಸೆಗೆ, ಶಸ್ತ್ರಚಿಕಿತ್ಸೆ, ಔಷಧೋಪಚಾರ, ರಕ್ತ ವರ್ಗಾವಣೆ, ಪುನರ್ವಸತಿ ಹಾಗೂ ಎರಡು-ಮೂರು ತಿಂಗಳ ಫೋಸ್ಟರ್ ಕೇರ್ ಸೇರಿ ಸುಮಾರು 30 ಸಾವಿರ ವೆಚ್ಚ ಆಗಲಿದ್ದು, ಈ ಮೊತ್ತವನ್ನು ನಗರಸಭೆಯೇ ಭರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಸಂಬಂಧ ನಗರಸಭೆ ತಕ್ಷಣ ವಾಹನ ಹಾಗೂ ಚಾಲಕನನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು, ತಪ್ಪಿತಸ್ಥರ ವಿರುದ್ಧ ಶಿಸ್ತು ಮತ್ತು ಕಾನೂನು ಕ್ರಮ ಜರುಗಿಸಬೇಕು ಹಾಗೂ ಏಳು ದಿನಗಳೊಳಗೆ 30 ಸಾವಿರ ಪರಿಹಾರ ಬಿಡುಗಡೆ ಮಾಡಬೇಕು ಎಂದು ನೋಟಿಸ್‌ನಲ್ಲಿ ಒತ್ತಾಯಿಸಲಾಗಿದೆ.

ಇಲ್ಲವಾದಲ್ಲಿ ಜಿಲ್ಲಾಧಿಕಾರಿ, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ನ್ಯಾಯಾಲಯದ ಮೊರೆ ಹೋಗುವುದಾಗಿ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಎಚ್ಚರಿಕೆ ನೀಡಿದೆ.

Edited By : Vijay Kumar
PublicNext

PublicNext

18/06/2026 12:23 pm

Cinque Terre

9.43 K

Cinque Terre

0

ಸಂಬಂಧಿತ ಸುದ್ದಿ