ಚಿಕ್ಕಮಗಳೂರು: ವಿದ್ಯುತ್ ವಲಯದ ಖಾಸಗೀಕರಣದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘವು ತೀವ್ರ ಆಕ್ರೋಶ ಹೊರಹಾಕಿದ್ದು, ಈ ನಿರ್ಧಾರವನ್ನು ವಿರೋಧಿಸಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯನ್ನು ಟಾಟಾ ಪವರ್ ಲಿಮಿಟೆಡ್ ಸಂಸ್ಥೆಗೆ ವಹಿಸಲು ಹುನ್ನಾರ ನಡೆಯುತ್ತಿದ್ದು, ಇದು ಅತ್ಯಂತ ಆಘಾತಕಾರಿ ನಿರ್ಧಾರವಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು. ದೇಶದಲ್ಲೇ ಅತಿ ಹೆಚ್ಚು ಅಂದರೆ ಸುಮಾರು 45 ಲಕ್ಷ ಕೃಷಿ ಪಂಪ್‌ಸೆಟ್‌ಗಳನ್ನು ಹೊಂದಿರುವ ಕರ್ನಾಟಕದಲ್ಲಿ, ಖಾಸಗೀಕರಣ ಜಾರಿಯಾದರೆ ರೈತರು ಪಡೆಯುತ್ತಿರುವ ವಿದ್ಯುತ್ ಸಬ್ಸಿಡಿ ಸಂಪೂರ್ಣವಾಗಿ ರದ್ದಾಗುವ ಭೀತಿ ಇದೆ. ಇದರಿಂದಾಗಿ ರೈತರ ಬೆಳೆಯುವ ಶಕ್ತಿ ಕುಂಠಿತಗೊಂಡು, ಕೃಷಿ ಉತ್ಪನ್ನಗಳ ಕೊರತೆಯಾಗಿ ದೇಶದ ಆಹಾರ ಭದ್ರತೆಗೇ ದೊಡ್ಡ ಧಕ್ಕೆ ಉಂಟಾಗಲಿದೆ ಎಂದು ಅವರು ಪ್ರತಿಭಟನಾ ನಿರತರು ಎಚ್ಚರಿಸಿದರು. ಸರ್ಕಾರವು ಸದ್ಯ ಗೃಹಜ್ಯೋತಿ, ಭಾಗ್ಯಜ್ಯೋತಿಯಂತಹ ಯೋಜನೆಗಳು ಹಾಗೂ ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ನೀಡುತ್ತಿರುವ ಸಬ್ಸಿಡಿ ವ್ಯವಸ್ಥೆಯು ಸಮರ್ಪಕವಾಗಿ ನಡೆಯುತ್ತಿದೆ. ಆದರೆ ಗ್ರಾಹಕರನ್ನು ಖಾಸಗಿ ಕಂಪನಿಗಳಿಗೆ ಹಂಚಿಕೆ ಮಾಡುವುದರಿಂದ ಕ್ರಾಸ್ ಸಬ್ಸಿಡಿ ವ್ಯವಸ್ಥೆಯು ಸರ್ವನಾಶವಾಗುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಟಾಟಾ ಪವರ್ ಸಂಸ್ಥೆಯು ಮುಂಬೈ, ದೆಹಲಿ, ಅಜ್ಮೀರ್ ಹಾಗೂ ಬಿಹಾರ್ ಸೇರಿದಂತೆ ಹಲವೆಡೆ ಜಾಲ ವಿಸ್ತರಿಸಿದ್ದರೂ, ಅಲ್ಲಿನ ಸಾರ್ವಜನಿಕ ವಲಯಕ್ಕೆ ಹೋಲಿಸಿದರೆ ಕಳಪೆ ಗುಣಮಟ್ಟದ ವಿದ್ಯುತ್ ನೀಡಲಾಗುತ್ತಿದೆ ಮತ್ತು ದರಗಳು ಅತ್ಯಂತ ಹೆಚ್ಚಾಗಿದ್ದು ಸಾರ್ವಜನಿಕರ ಮೇಲೆ ಭಾರಿ ಹೊರೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
Kshetra Samachara
18/06/2026 06:10 pm
LOADING...