ಚಿಕ್ಕಮಗಳೂರು: ಜಿಲ್ಲಾ ರೈತ ಸಂಘದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ತಾರಕಕ್ಕೇರಿದ್ದು, ಪ್ರೊ. ನಂಜುಂಡಸ್ವಾಮಿ ಅವರ ತತ್ವ-ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಡಿ. ಮಹೇಶ್ ಅವರನ್ನು ಉಚ್ಛಾಟಿಸಲಾಗಿದೆ ಎಂದು ಚಿಕ್ಕಮಗಳೂರು ತಾಲೂಕು ರೈತ ಸಂಘದ ಅಧ್ಯಕ್ಷ ಡಿ. ರಾಮೇಗೌಡ ಕಲ್ಲಹಳ್ಳಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲೇನಹಳ್ಳಿ ಗ್ರಾಮದ ಸರ್ವೆ ನಂ. 218ರ ಸರ್ಕಾರಿ ಜಾಗದಲ್ಲಿ ನಿವೇಶನಕ್ಕಾಗಿ ಆಶ್ರಯ ಪಡೆದಿರುವ ಬಡವರು, ದಲಿತರು ಹಾಗೂ ಅಲೆಮಾರಿ ಜನಾಂಗದವರ ವಿರುದ್ಧ ಜಿಲ್ಲಾಧ್ಯಕ್ಷರು ಮತ್ತು ಅವರ ಅನಧಿಕೃತ ಗುಂಪು ಹಣವಂತರ ಪರವಾಗಿ ನಿಂತು ಮೊಕದ್ದಮೆ ಹೂಡಲು ಮುಂದಾಗಿರುವುದು ಸಂಘದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯ ರೈತರ ಸಮಸ್ಯೆಗಳ ಪರ ಹೋರಾಟ ನಡೆಸಬೇಕಾದ ನಾಯಕತ್ವ, ವೈಯಕ್ತಿಕ ಸ್ವಾರ್ಥ ಮತ್ತು ಸಂಘ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ದೂರಿದ ಅವರು, ಈ ಬೆಳವಣಿಗೆಯಿಂದ ತಾಲೂಕು ಸಮಿತಿ ಹಾಗೂ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಇಂದಿನಿಂದ ಡಿ. ಮಹೇಶ್ ಹಾಗೂ ಅವರ ಗುಂಪಿನೊಂದಿಗೆ ತಾಲೂಕು ಘಟಕಕ್ಕೆ ಯಾವುದೇ ರೀತಿಯ ಸಂಬಂಧವಿರುವುದಿಲ್ಲ ಎಂದು ಘೋಷಿಸಿದ ರಾಮೇಗೌಡ ಕಲ್ಲಹಳ್ಳಿ, ಸಂಘವನ್ನು ಬಲಪಡಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.
PublicNext
13/06/2026 05:40 pm
LOADING...