ಎನ್.ಆರ್.ಪುರ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದೀಗ ಮಕ್ಕಳ ಶಿಕ್ಷಣಕ್ಕೂ ತೊಡಕಾಗಿ ಪರಿಣಮಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಚಿರತೆ ಮತ್ತು ಹುಲಿ ಭೀತಿಯಿಂದ 41 ಮಕ್ಕಳು ಕಳೆದ ಎರಡು ದಿನಗಳಿಂದ ಶಾಲೆಗೆ ಗೈರಾಗಿದ್ದಾರೆ. ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಬೈರಾಪುರ ಗ್ರಾಮದಿಂದ ಶಾಲೆಗೆ ತೆರಳುವ ಮಾರ್ಗವು ದಟ್ಟ ಅರಣ್ಯದ ನಡುವೆ ಸಾಗುತ್ತದೆ. ಇದೇ ಮಾರ್ಗದಲ್ಲಿ ಮಂಗಳವಾರ ಚಿರತೆ ಹಾಗೂ ಬುಧವಾರ ಹುಲಿ ಕಾಣಿಸಿಕೊಂಡಿರುವ ಮಾಹಿತಿ ಹೊರಬಿದ್ದಿದ್ದು, ಗ್ರಾಮಸ್ಥರು ಹಾಗೂ ಪೋಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಮಕ್ಕಳ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಹೇಳಿರುವ ಪೋಷಕರು, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಬೈರಾಪುರ ಶಾಲೆಯ 41 ವಿದ್ಯಾರ್ಥಿಗಳು ಎರಡು ದಿನಗಳಿಂದ ತರಗತಿಗಳಿಗೆ ಗೈರಾಗಿದ್ದಾರೆ. ಪ್ರತಿದಿನ ಮಕ್ಕಳು ಶಾಲೆಗೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಶಿಕ್ಷಕರು ಶಾಲೆಯಲ್ಲಿ ಕಾದು ಕುಳಿತುಕೊಳ್ಳುತ್ತಿದ್ದರೂ, ವಿದ್ಯಾರ್ಥಿಗಳಿಲ್ಲದೆ ಮರಳಿ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಯ ತಿಳಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪೋಷಕರು ಹಾಗೂ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದ್ದಾರೆ.
ಇನ್ನೊಂದೆಡೆ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿರುವ ಗ್ರಾಮಸ್ಥರು, ಶಾಲೆಗೆ ತೆರಳಲು ಪರ್ಯಾಯ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಅಭಯಾರಣ್ಯದ ಗಡಿಭಾಗದಲ್ಲಿ ಕಂದಕ ಹಾಗೂ ಸುರಕ್ಷತಾ ಬೇಲಿ ನಿರ್ಮಿಸಿ ವನ್ಯಜೀವಿಗಳ ಗ್ರಾಮ ಪ್ರವೇಶ ತಡೆಯಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಾಗೂ ಹುಲಿಯನ್ನು ಸೆರೆಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಪರ್ಯಾಯ ರಸ್ತೆ ನಿರ್ಮಾಣದ ಕುರಿತು ಎನ್.ಆರ್.ಪುರ ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ವನ್ಯಜೀವಿಗಳ ಭೀತಿಯಿಂದ ಮಕ್ಕಳ ಶಿಕ್ಷಣವೇ ಅಸ್ತವ್ಯಸ್ತವಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು, ಸಮಸ್ಯೆಗೆ ತ್ವರಿತ ಪರಿಹಾರ ಸಿಗಬೇಕೆಂಬ ಒತ್ತಾಯ ಹೆಚ್ಚಾಗಿದೆ.
PublicNext
12/06/2026 11:28 am