ಭಟ್ಕಳ: ರಾಜ್ಯ ಸರ್ಕಾರವು ಮೇ 22ರಂದು ಪರಿಷ್ಕೃತ ಕನಿಷ್ಠ ವೇತನವನ್ನು ಅಧಿಸೂಚಿಸಿ, ಹೊಸ ವೇತನ ದರಗಳನ್ನು ಜಾರಿಗೆ ತಂದಿದ್ದರೂ, ಭಟ್ಕಳ ನಗರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿಯ ಹೊರಗುತ್ತಿಗೆ ನೌಕರರಿಗೆ ಇದುವರೆಗೆ ಈ ಪರಿಷ್ಕೃತ ವೇತನವನ್ನು ಅನುಷ್ಠಾನಗೊಳಿಸಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ನೌಕರರು ಭಟ್ಕಳ ಕಾರ್ಮಿಕ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.
ಭಟ್ಕಳ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ನೀರು ಸರಬರಾಜು ನೌಕರರು, ವಾಹನ ಚಾಲಕರು, ಯುಜಿಡಿ ಸಿಬ್ಬಂದಿ, ಸ್ಯಾನಿಟರಿ ಸೂಪರ್‌ವೈಸರ್‌ಗಳು, ಅಕೌಂಟೆಂಟ್‌ಗಳು ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ತಕ್ಷಣದಿಂದಲೇ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಸ್ಪಷ್ಟವಾಗಿ ಒತ್ತಾಯಿಸಲಾಗಿದೆ.
ಸರ್ಕಾರದ ಆದೇಶದಂತೆ ವೇತನ ಪರಿಷ್ಕರಣೆ ಅನುಷ್ಠಾನಗೊಳ್ಳದ ಕಾರಣ ಹೊರಗುತ್ತಿಗೆ ನೌಕರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ, ಪರಿಷ್ಕೃತ ವೇತನದೊಂದಿಗೆ ಬಾಕಿ ಮೊತ್ತವನ್ನು ಕೂಡಲೇ ಪಾವತಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.
ಈ ಮನವಿ ಸಲ್ಲಿಕೆ ವೇಳೆ ಭಟ್ಕಳ ನಗರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿಯ ಹೊರಗುತ್ತಿಗೆ ಪೌರ ನೀರು ಸರಬರಾಜು ನೌಕರರು, ವಾಹನ ಚಾಲಕರು, ಯುಜಿಡಿ ಸಿಬ್ಬಂದಿ ಸೇರಿದಂತೆ ವಿವಿಧ ವಿಭಾಗಗಳ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
19/06/2026 08:25 pm
LOADING...