ಬೆಂಗಳೂರು: ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಮತ್ತೊಂದು ಮಹತ್ವದ ಮೈಲಿಗಲ್ಲು ಸಿಕ್ಕಿದ್ದು, ರಾಜ್ಯದಲ್ಲಿ ಬರೋಬ್ಬರಿ 7,506.62 ಕೋಟಿ ರೂಪಾಯಿ ಹೂಡಿಕೆಯ ಒಟ್ಟು 55 ಹೊಸ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಇಂದು ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ (SLSWCC) ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಸುಮಾರು 28,022 ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಪ್ರಕಟಿಸಿದ್ದಾರೆ.
ಈ ಯೋಜನೆಗಳ ಅತ್ಯಂತ ಪ್ರಮುಖ ಆಕರ್ಷಣೆಯೆಂದರೆ, ಅನುಮೋದನೆ ಪಡೆದಿರುವ ಒಟ್ಟು 55 ಯೋಜನೆಗಳ ಪೈಕಿ 41 ಯೋಜನೆಗಳು 'ಬಿಯಾಂಡ್ ಬೆಂಗಳೂರು' ಪರಿಕಲ್ಪನೆಯಡಿ ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿವೆ. 'ಹೂಡಿಕೆ ಜಿಲ್ಲೆಗಳತ್ತ, ಉದ್ಯೋಗ ಯುವಜನತೆಯತ್ತ' ಎನ್ನುವ ಧ್ಯೇಯದೊಂದಿಗೆ ರಾಜ್ಯದಾದ್ಯಂತ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಇದರಿಂದಾಗಿ ವಿಜಯಪುರ, ಕೊಡಗು, ಬಳ್ಳಾರಿ, ಗದಗ, ದಕ್ಷಿಣ ಕನ್ನಡ, ತುಮಕೂರು, ಕೋಲಾರ ಮತ್ತು ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೈಗಾರಿಕೆಗಳು ತಲೆಎತ್ತಲಿವೆ. ಇದಲ್ಲದೆ, ಜಾಗತಿಕ ಮಟ್ಟದಲ್ಲಿ ತೈವಾನ್, ಕೊರಿಯಾ, ಜರ್ಮನಿ ಹಾಗೂ ಜಪಾನ್ ಮೂಲದ 4 ವಿದೇಶಿ ಹೂಡಿಕೆ ಯೋಜನೆಗಳ ಮೂಲಕ 314.46 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗುತ್ತಿರುವುದು ವಿಶೇಷವಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಾಪನೆಯಾಗಲಿರುವ ಪ್ರಮುಖ ಕೈಗಾರಿಕೆಗಳ ವಿವರಗಳನ್ನು ನೋಡುವುದಾದರೆ, ಮೈಸೂರಿನಲ್ಲಿ ಕೇನ್ಸ್ ಟೆಕ್ನಾಲಜಿ ಇಂಡಿಯಾ ಸಂಸ್ಥೆಯು 495 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಇದರಿಂದ 2,000 ಉದ್ಯೋಗಗಳು ಸೃಷ್ಟಿಯಾಗಲಿವೆ. ಚಾಮರಾಜನಗರದಲ್ಲಿ ಎಸ್ಎಫ್ಒ ಟೆಕ್ನಾಲಜೀಸ್ ಸಂಸ್ಥೆಯು 490 ಕೋಟಿ ರೂಪಾಯಿ ಹೂಡಿಕೆಯೊಂದಿಗೆ 2,500 ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಇನ್ನು ವಿಜಯಪುರದಲ್ಲಿ ಟೆರ್ರಾ ಸರ್ಕ್ಯೂಟ್ಸ್ ಸಂಸ್ಥೆಯು 441 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಬರೋಬ್ಬರಿ 4,500 ಜನರಿಗೆ ಉದ್ಯೋಗ ನೀಡಲಿದೆ. ಹಾಗೆಯೇ ಬೆಂಗಳೂರು ಗ್ರಾಮಾಂತರದಲ್ಲಿ ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ ಸಂಸ್ಥೆಯು 404 ಕೋಟಿ ರೂಪಾಯಿ ಹೂಡಿಕೆಯೊಂದಿಗೆ 339 ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ರಾಜ್ಯದಾದ್ಯಂತ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಿ, ಉದ್ಯೋಗ ಸೃಷ್ಟಿಗೆ ವೇಗ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿರುವ ಸಚಿವ ಎಂ.ಬಿ. ಪಾಟೀಲ್ ಅವರು, ಏರೋಸ್ಪೇಸ್ ಹಾಗೂ ಇಎಸ್‌ಡಿಎಂ (Electronics System Design & Manufacturing) ಸೇರಿದಂತೆ ವಿವಿಧ ಮುಂಚೂಣಿ ವಲಯಗಳಲ್ಲಿ ಆಗುತ್ತಿರುವ ಈ ಹೂಡಿಕೆಗಳು ಕರ್ನಾಟಕದ ಕೈಗಾರಿಕಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
PublicNext
19/06/2026 10:46 pm