ಶಿಗ್ಗಾವಿ : ಶಿಗ್ಗಾವಿ ತಾಲೂಕಿನ ಅತ್ತಿಗೆರಿ ಗ್ರಾಮ ಪಂಚಾಯತಿಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಎಡವಟ್ಟಿನಿಂದ ಜೀವಂತವಾಗಿರುವ ಮಹಿಳೆಯನ್ನೇ ಮೃತರೆಂದು ದಾಖಲಿಸಿ ಮರಣ ಪ್ರಮಾಣ ಪತ್ರ ನೀಡಿರುವ ಪ್ರಕರಣಕ್ಕೆ ಸಖತ್ ಟ್ವಿಸ್ಟ್ ಸಿಕ್ಕಿದೆ.
ತಾಯಿ ಬದಲಿಗೆ ಮಗಳಿಗೆ ಮರಣ ಪ್ರಮಾಣಪತ್ರ ನೀಡಿದ ಪ್ರಕರಣದಲ್ಲಿ, ಸುಳ್ಳು ಇ-ಸ್ಟಾಂಪ್ ದಾಖಲೆ ಸೃಷ್ಟಿಸಿದ್ದಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯೊಬ್ಬರು ತಪ್ಪೊಪ್ಪಿಕೊಂಡಿದ್ದಾರೆ.
ಈ ಹಿಂದೆ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಸಾಳುಂಕೆ ಅತ್ತಿಗೆರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ದಾಖಲೆಗಳನ್ನ ಸರಿಯಾಗಿ ಪರಿಶೀಲಿಸದೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ರು. ಮಹಿಳೆಯ ಮಗ ಬಸವರಾಜ್ ದಾಖಲೆ ಸಲ್ಲಿಸುವಾಗ ಅಜ್ಜಿಯ ಬದಲು ಮಗಳ ದಾಖಲೆ ನೀಡಿದ್ದರಿಂದ ಅಧಿಕಾರಿಗಳು ಮರಣ ಪ್ರಮಾಣಪತ್ರ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಆದರೆ, 'ಪಬ್ಲಿಕ್ ನೆಕ್ಸ್ಟ್' ಈ ಪ್ರಕರಣದ ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಗ್ರಾಮ ಪಂಚಾಯತಿ ಕಾರ್ಯದರ್ಶಿಯನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದೆ. ಶಂಕ್ರವ್ವ ಅವರಿಗೆ ಮರಣ ಪ್ರಮಾಣಪತ್ರ ನೀಡಿದ ದಿನಾಂಕ ಮತ್ತು ಬಸವರಾಜ್ ಸಲ್ಲಿಸಿದ್ದಾರೆ ಎನ್ನಲಾದ ಅಫಿಡವಿಟ್‌ನಲ್ಲಿನ ಬಾಂಡ್ ಪೇಪರ್‌ನ ದಿನಾಂಕಗಳು ಪರಸ್ಪರ ವ್ಯತ್ಯಾಸಗೊಂಡಿರುವುದು ಪತ್ತೆಯಾಗಿದೆ.
ಈ ಬಗ್ಗೆ ಕಾರ್ಯದರ್ಶಿಯವರನ್ನು ಪ್ರಶ್ನಿಸಿದಾಗ, ಈ ಇ-ಸ್ಟಾಂಪ್ ಸುಳ್ಳು ಮಾಹಿತಿಗಳಿಂದ ಕೂಡಿದೆ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ, 'ನಮ್ಮಿಂದಲೇ ಈ ತಪ್ಪಾಗಿದೆ, ಈ ಪ್ರಕರಣದಲ್ಲಿ ನಾವು ಪ್ರಮಾದ ಎಸಗಿದ್ದೇವೆ' ಎಂದು ಕಾರ್ಯದರ್ಶಿಗಳು ತಪ್ಪೊಪ್ಪಿಗೆ ನೀಡಿದ್ದಾರೆ.
ಅನಕ್ಷರಸ್ಥ ಕುಟುಂಬದ ಮೇಲೆ ಸುಳ್ಳು ದಾಖಲಾತಿ ಸೃಷ್ಟಿಸಿದ ಅಧಿಕಾರಿಗಳ ಷಡ್ಯಂತ್ರವನ್ನು 'ಪಬ್ಲಿಕ್ ನೆಕ್ಸ್ಟ್' ಬಯಲು ಮಾಡಿದೆ.
ಒಟ್ನನಲ್ಲಿ ಅಧಿಕಾರಿಗಳ ಈ ಎಡವಟ್ಟಿನಿಂದಾಗಿ ಬಡ ಕುಟುಂಬವು ಸರ್ಕಾರದ ಸೌಲಭ್ಯಗಳು ಮತ್ತು ಮಾಸಿಕ ಪಿಂಚಣಿ ಹಣ ಸಿಗದೆ ಕಣ್ಣೀರು ಹಾಕುವಂತಾಗಿದೆ.
ವರದಿ : ರಮೇಶ್ ಸೋಮಕ್ಕನವರ ಪಬ್ಲಿಕ್ ನೆಕ್ಸ್ಟ್
PublicNext
20/06/2026 04:12 pm
LOADING...