ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಿಯಮಿತ ದಂಡ ವಸೂಲಾತಿ ಕಿರುಕುಳ ನಿಲ್ಲಿಸಿ : ಜೆಸ್ಕಾಂಗೆ ಶಾಸಕ ಡಾ. ಶ್ರೀನಿವಾಸ್ ತಾಕೀತು

ಕೂಡ್ಲಿಗಿ: "ಜೆಸ್ಕಾಂ (JESCOM) ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮೀಣ ಬಡ ಜನರಿಂದ ದಂಡ ವಸೂಲಿ ಮಾಡುವ ನೆಪದಲ್ಲಿ ಬಡ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂಬ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಕೆಲ ಹೋರಾಟಗಾರರು, ಸಂಘಟನಾಕಾರರು ಹಾಗೂ ರೈತರು ನೀಡಿರುವ ಮಾಹಿತಿಯಂತೆ, ಜೆಸ್ಕಾಂ ಸಿಬ್ಬಂದಿ ಅನಗತ್ಯವಾಗಿ ಜನರನ್ನು ಗುರಿಯಾಗಿಸಿಕೊಂಡು ಮಿತಿ ಮೀರಿದ ದಂಡ ವಸೂಲಿ ಮೂಲಕ ಗ್ರಾಮೀಣ ಜನತೆಯನ್ನು ಕೊಳ್ಳೆಹೊಡೆಯುತ್ತಿದ್ದಾರೆ. ಈ ಹಗಲು ದರೋಡೆ ಇಲ್ಲಿಗೆ ಕೊನೆಯಾಗಬೇಕು. ಕ್ಷೇತ್ರದಲ್ಲಿ ಅನಿಯಮಿತ ದಂಡ ವಸೂಲಾತಿಯನ್ನು ಕೂಡಲೇ ನಿಲ್ಲಿಸಬೇಕು" ಎಂದು ಕೂಡ್ಲಿಗಿ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಜೆಸ್ಕಾಂ ಅಧಿಕಾರಿಗಳಿಗೆ ಖಡಕ್ ತಾಕೀತು ಮಾಡಿದರು.

ಕೂಡ್ಲಿಗಿ ಕ್ಷೇತ್ರ, ಕೊಟ್ಟೂರು ತಾಲೂಕು ವ್ಯಾಪ್ತಿಯ ಕಾಳಾಪುರ ಗ್ರಾಮದಲ್ಲಿ ಜರುಗಿದ 'ಮನೆ ಮನೆಗೆ ನಮ್ಮ ಶಾಸಕರು - ಮನೆ ಬಾಗಿಲಿಗೆ ಸೇವೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮಸ್ಥರ ಕುಂದುಕೊರತೆ ಆಲಿಸುವ ವೇಳೆ ಅವರು ಈ ಎಚ್ಚರಿಕೆ ನೀಡಿದರು.

ಇದೇ ವೇಳೆ ಅರ್ಹ ಫಲಾನುಭವಿಗಳಿಗೆ 'ಭೂ ಗ್ಯಾರಂಟಿ' ಹಕ್ಕುಪತ್ರಗಳನ್ನು ವಿತರಿಸಿದ ಶಾಸಕರು, ಸಾರ್ವಜನಿಕರಿಂದ ನೂರಾರು ಅರ್ಜಿಗಳನ್ನು ಸ್ವೀಕರಿಸಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು. "ಸಾರ್ವಜನಿಕರನ್ನು ಕಚೇರಿಗಳಿಗೆ ವಿನಾಕಾರಣ ಅಲೆದಾಡಿಸುವುದು ಮತ್ತು ತಾರತಮ್ಯ ಎಸಗುವುದನ್ನು ನಾನು ಎಂದಿಗೂ ಸಹಿಸುವುದಿಲ್ಲ. ಅಧಿಕಾರಿಗಳು ಬಡವರ ಪರ ಕಾಳಜಿ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಯಿಂದ ಕೆಲಸ ಮಾಡಬೇಕು" ಎಂದು ಸೂಚಿಸಿದರು.

ಅಲ್ಲದೆ, "ಎಲ್ಲರೂ ನೈರ್ಮಲ್ಯ ಹಾಗೂ ಉತ್ತಮ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು. ರೈತರು ಮತ್ತು ಕಾರ್ಮಿಕರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿ, ಅವರನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿ ಬೆಳೆಸಲು ಆದ್ಯತೆ ನೀಡಬೇಕು" ಎಂದು ಕರೆ ನೀಡಿದರು.

Edited By : Somashekar
PublicNext

PublicNext

24/07/2026 02:02 pm

Cinque Terre

14.02 K

Cinque Terre

0

ಸಂಬಂಧಿತ ಸುದ್ದಿ