ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೊದಲಬಾಗಿಯಿಂದ ಚಿಕ್ಕಲಕಿ ಕ್ರಾಸ್‌ವರೆಗೆ ರೈತರ ಅರೆಬೆತ್ತಲೆ ಮೆರವಣಿಗೆ - ಬೃಹತ್ ಪ್ರತಿಭಟನೆ!

ಜಮಖಂಡಿ: ಚಿಕ್ಕಲಕಿ-ತೊದಲಬಾಗಿ-ಏಕಲಮಟ್ಟಿ ಏತ ನೀರಾವರಿ ಯೋಜನೆಯ ಕಾಮಗಾರಿ ವಿಳಂಬವನ್ನು ಖಂಡಿಸಿ, ತೊದಲಬಾಗಿಯಿಂದ ಅರೆಬೆತ್ತಲೆ ಮೆರವಣಿಗೆ ನಡೆಸಿದ ರೈತರು, ಚಿಕ್ಕಲಕಿ ಕ್ರಾಸ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಏಕಲಮಟ್ಟಿ ಏತ ನೀರಾವರಿ ಯೋಜನೆ ಆರಂಭವಾಗಿ ಸುಮಾರು 13 ವರ್ಷಗಳು ಕಳೆದರೂ ಇಂದಿಗೂ ರೈತರ ಜಮೀನುಗಳಿಗೆ ನೀರು ಹರಿಸಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

ವಿಜಯಪುರ - ಧಾರವಾಡ ಮುಖ್ಯ ಹೆದ್ದಾರಿಯ ಚಿಕ್ಕಲಕಿ ಕ್ರಾಸ್‌ನಲ್ಲಿ ಎತ್ತು-ಗಾಡಿಗಳ ಸಮೇತ ರಸ್ತೆ ತಡೆ ನಡೆಸಿದ ನೂರಾರು ರೈತರು, ಹೆದ್ದಾರಿ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿದರು. ಬಾಕಿ ಉಳಿದಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಕಾಲುವೆಗಳಿಗೆ ತಕ್ಷಣವೇ ನೀರು ಹರಿಸಬೇಕೆಂದು ಆಗ್ರಹಿಸಿದರು.

ಏಕಲಮಟ್ಟಿ ಏತ ನೀರಾವರಿ ಯೋಜನೆ ವಿಳಂಬವಾಗಿರುವುದು ತೀವ್ರ ಖಂಡನೀಯ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಈ ಬೃಹತ್ ಹೋರಾಟದಲ್ಲಿ ಬಾಗಲಕೋಟೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಹಾದೇವ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ರಾಮಪ್ಪ ಕರಜಗಿ, ಗ್ರಾಮ ರೈತ ಸಂಘದ ಅಧ್ಯಕ್ಷ ಸಹದೇವ್ ಕದಮ್, ರೈತ ಮುಖಂಡರಾದ ಸಿದ್ದರಾಯಿ ಸಣಸಿದ್ದ, ಅಪ್ಪಾಜಿ ಸೂರ್ಯವಂಶಿ, ಮಹೇಶ್ ಮಾಡಿಕ, ಪಾಂಡು ಜಾಂಬ್ರೆ, ಸಿದ್ದು ಭೋಸಲೆ, ಮಾಜಿ ಸೈನಿಕ ಶ್ರೀಧರ ಕಾಸರ, ದರಪ್ಪ ನಾವಿ, ಹಿರಿಯ ರೈತರಾದ ಸಾಬು ಗುಡ್ಡದ, ರೇವಣಸಿದ್ದ ಮಾದರ್, ಶ್ರೀಕಾಂತ ಬಡಿಗೇರ್ ಸೇರಿದಂತೆ ನೂರಾರು ರೈತರು ಹಾಗೂ ಯುವಕರು ಉಪಸ್ಥಿತರಿದ್ದರು.

ವರದಿ: ವಿನೋದ್ ಸೂರಗೊಂಡ, ಪಬ್ಲಿಕ್ ನೆಕ್ಸ್ಟ್, ಜಮಖಂಡಿ.

Edited By : Somashekar
PublicNext

PublicNext

24/07/2026 02:55 pm

Cinque Terre

8.88 K

Cinque Terre

0

ಸಂಬಂಧಿತ ಸುದ್ದಿ