ಬೆಂಗಳೂರು: ಕರ್ನಾಟಕವನ್ನು ಜಾಗತಿಕ ತಂತ್ರಜ್ಞಾನದ ಮಹಾದ್ವಾರವಾಗಿಸಲು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಈ ಬಾರಿಯ ಬೆಂಗಳೂರು ಟೆಕ್ ಸಮ್ಮಿಟ್ ನವೆಂಬರ್ 17 ರಿಂದ 19 ರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಈ ಬೃಹತ್ ಸಮಾವೇಶದಲ್ಲಿ 10,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು, 70ಕ್ಕೂ ಹೆಚ್ಚಿನ ದೇಶಗಳ ಪ್ರತಿನಿಧಿಗಳು ಹಾಗೂ ಸುಮಾರು 60,000ಕ್ಕೂ ಹೆಚ್ಚು ವೀಕ್ಷಕರು ಭಾಗವಹಿಸಲಿದ್ದಾರೆ. ಈ ವರ್ಷ ಹೊಸ ಸಂಶೋಧನೆ ಹಾಗೂ ನಾವೀನ್ಯತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಮುಂದಿನ 10 ವರ್ಷಗಳ ಕಾಲ 'ಡೀಪ್ ಟೆಕ್' ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುವ ಗುರಿ ಹೊಂದಲಾಗಿದೆ.
ನವೋದ್ಯಮಗಳಿಗೆ ಬೂಸ್ಟರ್ ಡೋಸ್ ನೀಡಲು 'ಎಲಿವೇಟ್ ನೆಕ್ಸ್ಟ್' ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಡಿ ಅರ್ಹ ಪ್ರತಿ ಸ್ಟಾರ್ಟ್‌ಅಪ್‌ಗೆ ₹1 ಕೋಟಿ ಪ್ರೋತ್ಸಾಹಧನ ನೀಡಲಾಗುವುದು. ಜೊತೆಗೆ, ಬಳಕೆಯಾಗದೆ ಉಳಿದಿದ್ದ ಎನ್‌ಜಿಇಎಫ್ ಆವರಣದಲ್ಲಿ 'MiST' ಎಂಬ ತಂತ್ರಜ್ಞಾನದ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗುತ್ತಿದೆ.
ವಿಶೇಷವೆಂದರೆ, ಮುಖ್ಯಮಂತ್ರಿಗಳು ಘೋಷಿಸಿರುವಂತೆ ರಾಜ್ಯದಲ್ಲಿ 'ಎಐ ಯೂನಿವರ್ಸಿಟಿ' ಸ್ಥಾಪನೆಯಾಗುತ್ತಿದ್ದು, ಖಾಸಗಿ ಹಾಗೂ ವಿದೇಶಿ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲಿದೆ. ಮುಂದಿನ 15-20 ದಿನಗಳಲ್ಲಿ ಇದರ ಸಂಪೂರ್ಣ ರೂಪುರೇಷೆ ಸಿದ್ಧವಾಗಲಿದೆ. ಒಟ್ಟಿನಲ್ಲಿ, ಜಾಗತಿಕ ಮಟ್ಟದ ಅತ್ಯುನ್ನತ ತಂತ್ರಜ್ಞಾನವನ್ನು ರಾಜ್ಯಕ್ಕೆ ತಂದು, ಕರ್ನಾಟಕವನ್ನು ತಂತ್ರಜ್ಞಾನದ ರಾಜಧಾನಿಯಾಗಿ ಇನ್ನಷ್ಟು ಎತ್ತರಕ್ಕೆ ಒಯ್ಯಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಛೇರ್ಮನ್ ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
PublicNext
24/07/2026 06:19 pm
LOADING...