ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಕಪ್ಪತ್ತಗುಡ್ಡಕ್ಕೆ‌ ಲಂಟಾನ ಕಳೆ ಕಂಟಕ; ಜನ ಆತಂಕ

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರಾದ ಜಿಲ್ಲೆಯ ಕಪ್ಪತ್ತಗುಡ್ಡಕ್ಕೆ ಲಂಟಾನ ಕಳೆಯ ಕಾಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಪ್ಪತ್ತಗುಡ್ಡದ ಬೆಟ್ಟದ ಸರಣಿಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಲಂಟಾನ ಕಳೆ ಕಿರಿಕಿರಿ ಉಂಟು ಮಾಡುತ್ತಿದೆ. ದಶಕದ ಹಿಂದೆ ಕಪ್ಪತ್ತಗುಡ್ಡದ ಬೆಟ್ಟಗಳಲ್ಲಿ ಲಂಟಾನ ಕಾಣಿಸಿಕೊಂಡಿರಲಿಲ್ಲ. ಆದರೆ, ಕಳೆದ 4-5 ವರ್ಷಗಳಲ್ಲಿ ಹರಡಲು ಪ್ರಾರಂಭಿಸಿದ್ದು, ದಟ್ಟವಾದ ಪೊದೆಗಳಂತೆ ಬೆಳೆದು ಇತರ ಸಸ್ಯಗಳಿಗೆ ಸೂರ್ಯನ ಬೆಳಕು ಮತ್ತು ಪೋಷಕಾಂಶ ಸಿಗದಂತೆ ಮಾಡುತ್ತಿದೆ. ಇದರಿಂದ ಅತ್ಯಮೂಲ್ಯ ಔಷಧೀಯ ಸಸ್ಯ ಸಂಕುಲಕ್ಕೂ ಕುತ್ತು ಎದುರಾಗಿದೆ.

83000 ಹೆಕ್ಟೇರ್, ಮೂರು ತಾಲೂಕು ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಕಪ್ಪತ್ತಗುಡ್ಡದ ವಿವಿಧ ಭಾಗಗಳಲ್ಲಿ ಪ್ರಾಚೀನ ಐತಿಹ್ಯದ ಜಾಗಗಳಿವೆ. ಆದರೆ, ದಟ್ಟ ಪೊದೆಯಾಗಿ ಬೆಳೆದ ಲಂಟಾನ ಕಸ ಆ ಜಾಗಗಳಿಗೆ ಹೋಗುವ ಕಾಲುದಾರಿಗಳು ಕಾಣದಂತೆ ಹಬ್ಬಿಕೊಂಡಿದೆ. ಲಂಟಾನ ವಿಷಕಾರಿಯಾಗಿದ್ದು, ಇದರ ಎಲೆಗಳಲ್ಲಿರುವ ರಾಸಾಯನಿಕಗಳು ಮತ್ತು ಒಣಗಿದ ಕಾಂಡಗಳು ಬೇಗನೆ ಬೆಂಕಿ ಹತ್ತಿಕೊಳ್ಳಲು ಕಾರಣವಾಗಿ ಕಾಡಿಗೆ ಹೆಚ್ಚಿನ ಹಾನಿ ಉಂಟು ಮಾಡುತ್ತವೆ. ಇದರ ಎಲೆ ಮತ್ತು ಹಣ್ಣುಗಳನ್ನು ತಿನ್ನುವ ದನ, ಕುರಿ ಹಾಗೂ ಮೇಕೆಗಳಿಗೆ ಪಿತ್ತ ಜನಕಾಂಗದ ತೊಂದರೆ ಮತ್ತು ಕಾಮಾಲೆ ಉಂಟಾಗುತ್ತದೆ.

ಬೇಸಿಗೆ ಸಮಯದಲ್ಲಿ ಒಣಗುವ ಲಂಟಾನ ಕಾಡ್ಗಿಚ್ಚಿನ ತೀವ್ರತೆ ಹೆಚ್ಚಲು ಕಾರಣವಾಗುತ್ತದೆ. ಇದು ಅರಣ್ಯ ಇಲಾಖೆಗೂ ತಲೆನೋವಾಗಿದೆ. ಈಗಾಗಲೇ ಮೂರ್ನಾಲ್ಕು ಕಾರ್ಪೊರೇಟ್ ಕಂಪನಿಗಳ ಸಿಎಸ್ಆರ್ ನಿಧಿ ಮೂಲಕ ಲಂಟಾನ ಕಳೆ ನಿರ್ಮೂಲನೆಗೆ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಪ್ರವಾಸಿಗರಿಗೂ ಲಂಟಾನ ಕಳೆ ದಾರಿಗುಂಟವೇ ಬೆಳೆದಿರುವುದರಿಂದ ಸಾಕಷ್ಟು ಕಿರಿಕಿರಿಯಾಗುತ್ತಿದೆ.

ತನ್ನದೇ ಆದ ಐತಿಹ್ಯವುಳ್ಳ ಕಪ್ಪತ್ತಗುಡ್ಡ ಸಂಪೂರ್ಣ ಕುರುಚಲು ಕಾಡು. ಮಳೆಗಾಲದ ಸಮಯಕ್ಕೆ ಅದರ ಸೌಂದರ್ಯ ನೂರ್ಮಡಿ ಹೆಚ್ಚು. ಅಂತಹ ಮಹತ್ವದ ಸ್ಥಳಕ್ಕೆ ಲಂಟಾನ ಕಳೆಯಿಂದ ಆತಂಕ ಶುರುವಾಗಿದ್ದು, ಕೂಡಲೇ ಅದರ ನಿರ್ಮೂಲನೆಗೆ ಅರಣ್ಯ ಇಲಾಖೆ ಸಿದ್ಧವಾಗಬೇಕಿದೆ.

Edited By :
PublicNext

PublicNext

25/07/2026 06:20 pm

Cinque Terre

12.77 K

Cinque Terre

0

ಸಂಬಂಧಿತ ಸುದ್ದಿ