ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ ‘ವಿಜಯನಗರ ತಿರುಗಾಟ’ ಸಂಶೋಧನ ತಂಡವು ವಿಜಯನಗರೋತ್ತರ ಕಾಲದ ಗ್ರಾಮೀಣ ಆಡಳಿತ, ಧಾರ್ಮಿಕ ವ್ಯವಸ್ಥೆ ಮತ್ತು ದಾನ ಸಂಸ್ಕೃತಿಯ ಕುರಿತು ಮಹತ್ವದ ಮಾಹಿತ ನೀಡುವ ಅಪರೂಪದ ಶಾಸನವೊಂದನ್ನು ಪತ್ತೆ ಹಚ್ಚಿದೆ. ಇದು ಕೇವಲ ಒಂದು ಶಾಸನದ ಪತ್ತೆಯಲ್ಲ; ಗ್ರಾಮವೊಂದರ ಮರೆತುಹೋದ ಇತಿಹಾಸವನ್ನು ಮರುಜೀವಗೊಳಿಸಿದ ಮಹತ್ವದ ಸಂಶೋಧನೆಯಾಗಿದೆ.
ದೊಡ್ಡ ಅಂತಾಪುರದ ಚಂದ್ರಶೇಖರ ಅವರ ಹೊಲದ ಬದುವಿನ ಉತ್ತರಾಭಿಮುಖವಾಗಿರುವ ಹುಟ್ಟುಬಂಡೆಯ ಮೇಲೆ ಈ ಶಾಸನವನ್ನು ಕೆತ್ತಲಾಗಿದೆ. ವಿಜಯನಗರ ತಿರುಗಾಟ ಸಂಶೋಧನ ತಂಡದ ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೇಗೌಡ, ಸಂಶೋಧಕರಾದ ಎಚ್. ರವಿ, ಅಶೋಕ ನಾಯಕ್ ದಿದ್ದಿಗಿ, ಇಸ್ಮಾಯಿಲ್ ಸಿದ್ದಿಕಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಮಾರುತಿ ಜಿ.ವಿ. ಮತ್ತು ಶ್ರೀಕಾಂತ ಅವರು ಸ್ಥಳೀಯರಾದ ತಾಯಪ್ಪ, ರಾಗಿ ಶಿವರಾಮಪ್ಪ, ಬಂಡ್ರಿ ಪಾಪಯ್ಯ ಹಾಗೂ ಬಾಬಣ್ಣ ಅವರ ಸಹಕಾರದೊಂದಿಗೆ ಈ ಶಾಸನವನ್ನು ಶೋಧಿಸಿದ್ದಾರೆ.
ಶಾಸನದ ಶಿಲ್ಪಕಲೆ - ಭಕ್ತಿ ಕಲೆಯ ಸಂಗಮ!
ಈ ಶಾಸನವು ಸುಮಾರು ನಾಲ್ಕು ಅಡಿ ಎತ್ತರ ಮತ್ತು ಮೂರು ಅಡಿ ಅಗಲವಿರುವ ಗ್ರಾನೈಟ್ ಬಂಡೆಯ ಮೇಲೆ ಕೆತ್ತಲ್ಪಟ್ಟಿದೆ. ಶಾಸನದ ಎಡಭಾಗದಲ್ಲಿ ಚಂದ್ರ, ಬಲಭಾಗದಲ್ಲಿ ಸೂರ್ಯನ ಚಿಹ್ನೆಗಳಿದ್ದು, ಮಧ್ಯದಲ್ಲಿ ಶಿವಲಿಂಗದ ಎದುರು ಭಕ್ತಿಭಾವದಿಂದ ಕುಳಿತಿರುವ ನಂದಿಯ ಸುಂದರ ಶಿಲ್ಪವಿದೆ. ಅದರ ಕೆಳಭಾಗದಲ್ಲಿ ದೊಡ್ಡಗಾತ್ರದ ಶಿವಲಿಂಗವನ್ನು ಕೆತ್ತಿರುವುದು ಶಾಸನದ ಧಾರ್ಮಿಕ ಮಹತ್ವವನ್ನು ಎತ್ತಿಹಿಡಿಯುತ್ತದೆ. ಅಲ್ಲದೆ, ಇದನ್ನು ಬರೆಸಿದವರು ಶೈವ ಧರ್ಮದವರೆಂದು ಸ್ಪಷ್ಟವಾಗುತ್ತದೆ.
ಕನ್ನಡ ಲಿಪಿಯಲ್ಲಿರುವ ಈ ಶಾಸನವು ಒಟ್ಟು ಎಂಟು ಸಾಲುಗಳನ್ನು ಒಳಗೊಂಡಿದೆ. "ಶುಭಮಸ್ತು" ಎಂಬ ಮಂಗಳಕರ ಪದದಿಂದ ಆರಂಭವಾಗುವ ಶಾಸನದಲ್ಲಿ, ಅಂತಾಪುರದ ದಳವಾಯಿ ತಿರುಮಲಯ್ಯ ಮತ್ತು ಗೌಡ ಹನುಮಿನಾಯಕರು ಮಲ್ಲಿಕಾರ್ಜುನ ದೇವಾಲಯಕ್ಕೆ ಭೂಮಿಯನ್ನು ದಾನವಾಗಿ ನೀಡಿದ ವಿಷಯ ದಾಖಲಾಗಿದೆ. ಈ ಭೂಮಿಯಿಂದ ಬರುವ ಆದಾಯದಿಂದ ದೇವರಿಗೆ ನಿತ್ಯಪೂಜೆ ಮತ್ತು 'ಅಮೃತಪಡಿ ನೈವೇದ್ಯ' ನಿರಂತರವಾಗಿ ನಡೆಯಬೇಕು ಎಂಬ ಉಲ್ಲೇಖವಿದೆ.
ದಳವಾಯಿ ಮತ್ತು ಗೌಡರ ದಾನಧರ್ಮ:
ದೇವಾಲಯಗಳ ಪೂಜೆ, ನೈವೇದ್ಯ ಹಾಗೂ ಉತ್ಸವಗಳ ನಿರ್ವಹಣೆಗೆ ಶಾಶ್ವತ ಆದಾಯದ ಮೂಲ ಕಲ್ಪಿಸಲು ಭೂದಾನ ನೀಡುವ ಪದ್ಧತಿ ವ್ಯಾಪಕವಾಗಿತ್ತು. ಈ ಶಾಸನದಲ್ಲಿ 'ದಳವಾಯಿ' (ಸೇನಾಧಿಪತಿ/ಪ್ರಮುಖ ಆಡಳಿತಗಾರ) ಮತ್ತು 'ಗೌಡ' (ಗ್ರಾಮಾಡಳಿತದ ನಾಯಕ) ಎಂಬ ಎರಡು ಪ್ರಮುಖ ಆಡಳಿತ ಹುದ್ದೆಗಳ ಉಲ್ಲೇಖವಿದೆ.
ಇವರು ಸೇರಿ ದೇವಾಲಯಕ್ಕೆ ದಾನ ನೀಡಿರುವುದು ಆ ಕಾಲದಲ್ಲಿ ಸ್ಥಳೀಯ ಆಡಳಿತ ಮತ್ತು ಧಾರ್ಮಿಕ ಸಂಸ್ಥೆಗಳ ನಡುವೆ ಇದ್ದ ಉತ್ತಮ ಹೊಂದಾಣಿಕೆಯನ್ನು ಸೂಚಿಸುತ್ತದೆ. ಗ್ರಾಮಗಳ ಅಭಿವೃದ್ಧಿ, ದೇವಾಲಯಗಳ ನಿರ್ವಹಣೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಕಾರ್ಯಗಳಲ್ಲಿ ಆಡಳಿತಾಧಿಕಾರಿಗಳು ಸಕ್ರಿಯ ಪಾತ್ರ ವಹಿಸುತ್ತಿದ್ದರು ಎಂಬುದಕ್ಕೆ ಈ ಶಾಸನ ದೃಢ ಸಾಕ್ಷಿಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಪ್ರಾಧ್ಯಾಪಕರಾದ ಡಾ. ಗೋವಿಂದ ಅಭಿಪ್ರಾಯಪಟ್ಟಿದ್ದಾರೆ.
ದೊಡ್ಡ ಅಂತಾಪುರದ ಈ ದಾನ ಶಾಸನವು ಒಂದು ಕಾಲದ ಆಡಳಿತ, ಭಕ್ತಿ, ದಾನಧರ್ಮ, ಗ್ರಾಮೀಣ ವ್ಯವಸ್ಥೆ ಮತ್ತು ಸಾಮಾಜಿಕ ಮೌಲ್ಯಗಳ ಜೀವಂತ ದಾಖಲೆಯಾಗಿದೆ. ಇಂತಹ ಪರಂಪರೆಯನ್ನು ಉಳಿಸುವುದು ನಮ್ಮೆಲ್ಲರ ಸಾಂಸ್ಕೃತಿಕ ಜವಾಬ್ದಾರಿಯಾಗಿದೆ.
Kshetra Samachara
26/07/2026 12:42 pm