ಬಾಗಲಕೋಟೆ : ಜಮಖಂಡಿಯಲ್ಲಿ ಸಂಭವಿಸಿದ ಕಾರು ಸ್ಫೋಟ ಪ್ರಕರಣದಲ್ಲಿ ಯಾವುದೇ ಬಾಂಬ್ ಸ್ಫೋಟ ಸಂಭವಿಸಿಲ್ಲ. ಕಾರಿನ ತಾಂತ್ರಿಕ ದೋಷ ಅಥವಾ ಬ್ಯಾಟರಿ ಸಮಸ್ಯೆಯಿಂದ ಸಂಭವಿಸಿರಬಹುದು ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಬಾಗಲಕೋಟೆ ಎಸ್ಪಿ ಸಿದ್ಧಾರ್ಥ ಗೋಯಲ್ ಸ್ಪಷ್ಟಪಡಿಸಿದ್ದಾರೆ.
ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಮಹಿಂದ್ರಾ ಎಕ್ಸ್‌ಯುವಿ 300 ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಅವರು, ಇದು ಬಾಂಬ್ ಅಥವಾ ಯಾವುದೇ ಸ್ಪೋಟಕದಿಂದ ನಡೆದ ಘಟನೆಯಲ್ಲ. ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸಿದ್ದೇವೆ. ಕಾರಿನಲ್ಲಿ ಬಾಂಬ್ ಇಟ್ಟಿರುವ ಕುರುಹುಗಳು ನಮಗೆ ಸಿಕ್ಕಿಲ್ಲ. ಬ್ಯಾಟರಿ ಅಥವಾ ತಾಂತ್ರಿಕ ದೋಷದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಸ್ಫೋಟದ ತೀವ್ರತೆ ಸುಮಾರು 50 ರಿಂದ 60 ಮೀಟರ್ ವ್ಯಾಪ್ತಿಯಷ್ಟಿತ್ತು. ಬಾಂಬ್ ಆಗಿದ್ದರೆ ಅದರ ತೀವ್ರತೆ ಹೆಚ್ಚಾಗಿ ಇರುತ್ತಿತ್ತು. ಯಾರಿಗೂ ಗಂಭೀರ ಗಾಯವಾಗಿಲ್ಲ. ಒಬ್ಬ ವ್ಯಕ್ಯಿಗೆ ಸ್ವಲ್ಪ ಗಾಯ ಆಗಿದೆ, ಆತ ಈಗಾಗಲೇ ಮನೆಯಲ್ಲಿದ್ದಾನೆ. ಸಂಪೂರ್ಣ ವರದಿ ಬಂದ ಬಳಿಕವೇ ನಿಖರ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.
PublicNext
27/07/2026 08:37 am
LOADING...