ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

20 ವರ್ಷಗಳ ಬರ ನೀಗಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಶರ್ಮಿಳಾ ಧಂಕರ್.! 8ನೇ ಸ್ಥಾನದಲ್ಲಿ ಭಾರತ

ಗ್ಲ್ಯಾಸ್ಗೋ: ಭಾರತದ ಪ್ಯಾರಾ ಅಥ್ಲೀಟ್ ಶರ್ಮಿಳಾ ಧಂಕರ್ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಮಹಿಳೆಯರ ಶಾಟ್‌ಪುಟ್ F57 ವಿಭಾಗದಲ್ಲಿ ಚಿನ್ನದ ಪದಕ ಗೆದ್ದು, ಕಾಮನ್‌ವೆಲ್ತ್ ಇತಿಹಾಸದಲ್ಲಿ ಭಾರತದ ಪರ ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

40 ವರ್ಷದ ಶರ್ಮಿಳಾ ಫೈನಲ್‌ನಲ್ಲಿ 9.81 ಮೀಟರ್ ದೂರಕ್ಕೆ ಗುಂಡು ಎಸೆದು ಅಗ್ರಸ್ಥಾನ ಕಾಯ್ದುಕೊಂಡು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.

ಇದೇ ಸ್ಪರ್ಧೆಯಲ್ಲಿ ಕರ್ನಾಟಕದ ಕೆ. ಶಿಲ್ಪಾ 7.26 ಮೀಟರ್ ದೂರ ಎಸೆದು ಆರಂಭದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಬಳಿಕ ತಾಂತ್ರಿಕ ಪರಿಶೀಲನೆಯಲ್ಲಿ ನೈಜೀರಿಯಾದ ಸ್ಪರ್ಧಿಯ ಎಸೆತ ಅಸಿಂಧು ಎಂದು ಘೋಷಿಸಲ್ಪಟ್ಟ ಹಿನ್ನೆಲೆಯಲ್ಲಿ ಶಿಲ್ಪಾಗೆ ಕಂಚಿನ ಪದಕ ಲಭಿಸಿತು. ಇದರೊಂದಿಗೆ ಶಾಟ್‌ಪುಟ್ F57 ವಿಭಾಗದಲ್ಲಿ ಭಾರತ ಚಿನ್ನ ಮತ್ತು ಕಂಚು ಎರಡನ್ನೂ ಗೆದ್ದು ಸಂಭ್ರಮಿಸಿತು.

ಕಾಮನ್‌ವೆಲ್ತ್ ಗೇಮ್ಸ್‌ನ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಪದಕ ಬಂದಿದ್ದು 20 ವರ್ಷಗಳ ಬಳಿಕ. 2006ರಲ್ಲಿ ರಂಜಿತ್ ಕುಮಾರ್ ಜಯಶೀಲನ್ ಡಿಸ್ಕಸ್ ಥ್ರೋ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೀಗ ಶರ್ಮಿಳಾ ಧಂಕರ್ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಎರಡು ವರ್ಷದ ವಯಸ್ಸಿನಲ್ಲೇ ಪೋಲಿಯೋದಿಂದ ಎಡಗಾಲಿನ ಸ್ವಾಧೀನ ಕಳೆದುಕೊಂಡಿದ್ದ ಶರ್ಮಿಳಾ, ಆರ್ಥಿಕ ಸಂಕಷ್ಟ ಹಾಗೂ ಹಲವು ಸವಾಲುಗಳನ್ನು ಮೀರಿ ಜಾಗತಿಕ ಕ್ರೀಡಾ ವೇದಿಕೆಯಲ್ಲಿ ಭಾರತದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ.

ಶರ್ಮಿಳಾ ಅವರ ಚಿನ್ನದ ಪದಕದೊಂದಿಗೆ ಭಾರತವು ಐದನೇ ದಿನದ ಅಂತ್ಯಕ್ಕೆ 10 ಪದಕಗಳು (2 ಚಿನ್ನ, 5 ಬೆಳ್ಳಿ, 3 ಕಂಚು) ಗೆದ್ದು ಒಟ್ಟಾರೆ ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

Edited By :
PublicNext

PublicNext

28/07/2026 01:23 pm

Cinque Terre

24.86 K

Cinque Terre

3

ಸಂಬಂಧಿತ ಸುದ್ದಿ