ನಂಜನಗೂಡು: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 60ಕ್ಕೂ ಹೆಚ್ಚು ಜಾನುವಾರುಗಳನ್ನು ಕವಲಂದೆ ಪೊಲೀಸರು ರಕ್ಷಿಸಿದ್ದಾರೆ, ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಮೈಸೂರಿನ ಸಯ್ಯದ್ ಜಾವಿದ್ (43) ಬಂಧಿತ.
ಎರಡು ಲಾರಿಗಳಲ್ಲಿ ಅಕ್ರಮವಾಗಿ ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರುವ ಬಗ್ಗೆ ಬಾತ್ಮಿದಾರರಿಂದ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕವಲಂದೆ ಪಿಎಸ್ಐ ಬಿ. ಬಸವರಾಜು ಬಿ. ನೇತೃತ್ವದ ತಂಡವು ನಂಜನಗೂಡು-ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಪರಿಶೀಲನೆ ನಡೆಸಿದರು. ಈ ವೇಳೆ ನಂಜನಗೂಡು ಕಡೆಯಿಂದ ಬಂದ KA-01 AG-4796 ಮತ್ತು KA-16 B-5714 ನಂಬರ್‌ನ 2 ಈಚರ್ ಕ್ಯಾಂಟರ್ ವಾಹನಗಳನ್ನು ಪೊಲೀಸರು ತಡೆದರು. ಪೊಲೀಸರನ್ನು ಕಂಡು ಇಬ್ಬರು ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಓರ್ವ ಕ್ಲೀನರ್‌ನನ್ನು ಬಂಧಿಸಿದ್ದಾರೆ.
ವಾಹನದಲ್ಲಿ 1 ಗಂಡು ಕರು, 11 ಹೋರಿ, 14 ಎಮ್ಮೆ ಕರು, 1 ಎಮ್ಮೆ, 1 ಹಸು, 1 ಎಮ್ಮೆ ಕೋಣ, 2 ಎಮ್ಮೆ ಕಡಸು ಸೇರಿ 31 ಜಾನುವಾರುಗಳು ಮತ್ತು ಮತ್ತೊಂದು ವಾಹನದಲ್ಲಿ 7 ಕಡಸು, 16 ಹೋರಿ, 1 ಹಸು, 4 ಗಂಡು ಕರು, 1 ಕೋಣ, 3 ಎಮ್ಮೆ ಕರು, 1 ಎಮ್ಮೆ ಕಡಸು ಸೇರಿ 33 ಜಾನುವಾರುಗಳು ಇದ್ದವು.
ಮೈಸೂರಿನಿಂದ ಜಾನುವಾರುಗಳನ್ನು ತುಂಬಿಕೊಂಡು ತಾಳವಾಡಿ ಕಸಾಯಿಖಾನೆಗೆ ಸಾಗಿಸುತ್ತಿರುವುದು ತಿಳಿದು ಬಂದಿದೆ. ಜಾನುವಾರುಗಳನ್ನು ಅತ್ಯಂತ ಹಿಂಸಾರೂಪದಲ್ಲಿ ತುಂಬಿ ಸಾಗಿಸುತ್ತಿದ್ದ ಕಾರಣ ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು ಇತರೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಬಿ. ಬಸವರಾಜು, ಲಿಂಗರಾಜು ಎಂ., ರಮೇಶ್ ಭಾಗಿಯಾಗಿದ್ದರು.
PublicNext
28/07/2026 08:50 pm
LOADING...