ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಿಪಟೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆದಿನಾಯಕನಹಳ್ಳಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ

ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ತಿಪಟೂರು ತಾಲೂಕಿನ ಸಾರ್ಥವಳ್ಳಿ ವಲಯದ ಆದಿನಾಯಕನಹಳ್ಳಿ ಕನಕಶ್ರೀ ಜ್ಞಾನವಿಕಾಸ ಕೇಂದ್ರದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ತಾಲೂಕಿನ ಯೋಜನಾಧಿಕಾರಿ ಉದಯ್ ಕೆ. ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಯಾವಾಗ ಎದುರಾಗುತ್ತವೆ ಎಂಬುದು ತಿಳಿಯದಿರುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ. ಅನಾರೋಗ್ಯ ಕಾಣಿಸಿಕೊಂಡ ಬಳಿಕವಷ್ಟೇ ಆಸ್ಪತ್ರೆಗೆ ಹೋಗುವುದಕ್ಕಿಂತ ಮುಂಚಿತವಾಗಿಯೇ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತರಾಗಿ ಬದುಕಬೇಕು ಎಂದು ಕರೆ ನೀಡಿದರು.

ಶಿಬಿರದಲ್ಲಿ ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಯ ಹಿರಿಯ ತಾಂತ್ರಿಕ ತಜ್ಞ ಡಾ. ಮಂಜುನಾಥ್ ಹಾಗೂ ಸಿಬ್ಬಂದಿಯು ರಕ್ತದೊತ್ತಡ, ಮಧುಮೇಹ, ತೂಕ, ಇಸಿಜಿ, ಪಾದ ಪರೀಕ್ಷೆ ಹಾಗೂ ಸ್ಕ್ಯಾನಿಂಗ್ ನಡೆಸಿ, ಗ್ಯಾಂಗ್ರಿನ್ ತಡೆಗಟ್ಟುವ ಕುರಿತು ಮಾಹಿತಿ ನೀಡಿದರು. ಅನ್ವಿ ಹಿಯರಿಂಗ್ ಸೆಂಟರ್‌ನ ಡಾ. ಭದ್ರೇಶ್ ಕಿವಿ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಿದರು. ಸುನಂದಾ ಕಣ್ಣಿನ ಆಸ್ಪತ್ರೆಯ ಡಾ. ಸುಮಾ ಕಣ್ಣಿನ ತಪಾಸಣೆ ನಡೆಸಿದರು. ಕುಮಾರ್ ಆಸ್ಪತ್ರೆಯ ಆರೋಗ್ಯ ಸಹಾಯಕರು ಸಾಮಾನ್ಯವಾಗಿ ಕಂಡುಬರುವ ಕಾಯಿಲೆಗಳ ಕುರಿತು ಅರಿವು ಮೂಡಿಸಿ ಆರೋಗ್ಯ ತಪಾಸಣೆ ನಡೆಸಿದರು.

ಕಾರ್ಯಕ್ರಮದಲ್ಲಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ರೇಖಾ ಪಿ. ಗುಡಿಗೌಡ, ಜ್ಞಾನವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ ಎಂ.ಡಿ., ಮೇಲ್ವಿಚಾರಕ ಪ್ರದೀಪ್ ರೈ, ಸೇವಾಪ್ರತಿನಿಧಿ ನಾಗಮಣಿ ಹಾಗೂ ಕನಕಶ್ರೀ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

29/07/2026 09:51 am

Cinque Terre

17.98 K

Cinque Terre

0

ಸಂಬಂಧಿತ ಸುದ್ದಿ