ಬ್ರಹ್ಮಾವರ (ಉಡುಪಿ): ಚಾಂತಾರು ನಿವಾಸಿ, ಬಡಗುತಿಟ್ಟಿನ ಹಿರಿಯ ಮದ್ದಲೆ ವಾದಕ ಹಾಗೂ ಯಕ್ಷಗಾನ ಗುರು ಕೃಷ್ಣಸ್ವಾಮಿ ಜೋಯಿಸ್ (75) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಮುಂಜಾನೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಪ್ರಥಮ ತಂಡದ ವಿದ್ಯಾರ್ಥಿಯಾಗಿದ್ದ ಇವರು, ಪ್ರಸಿದ್ಧ ಭಾಗವತ ನಾರ್ಣಪ್ಪ ಉಪ್ಪೂರ ಮತ್ತು ಬೇಳಂಜೆ ತಿಮ್ಮಪ್ಪ ನಾಯಕರ ಶಿಷ್ಯರಾಗಿ ಭಾಗವತಿಕೆ ಹಾಗೂ ಮದ್ದಲೆ ವಾದನದಲ್ಲಿ ವಿಶೇಷ ಸಿದ್ಧಿ ಸಾಧಿಸಿದ್ದರು. ಜೊತೆಗೆ, ಎಚ್. ಸುಬ್ಬಣ್ಣ ಭಟ್ಟರ ಮಾರ್ಗದರ್ಶನದಲ್ಲಿ ಪ್ರಸಾಧನ (ವೇಷಭೂಷಣ/ಬಣ್ಣಗಾರಿಕೆ) ತಜ್ಞರಾಗಿಯೂ ದೀರ್ಘಕಾಲ ಸೇವೆ ಸಲ್ಲಿಸಿದ್ದರು.
ಅಜಪುರ ಯಕ್ಷಗಾನ ಮಂಡಳಿಯ ಗೌರವಾಧ್ಯಕ್ಷರಾಗಿದ್ದ ಜೋಯಿಸರು ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ದೀರ್ಘಕಾಲ ಮದ್ದಲೆವಾದಕರಾಗಿ ದೇಶ-ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದರು. ಯಕ್ಷಗಾನದ ಹಿಮ್ಮೇಳ ಹಾಗೂ ಮುಮ್ಮೇಳ ಎರಡರ ಪಾರಂಪರಿಕ ಸೂಕ್ಷ್ಮತೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದ ಇವರು, ಯಕ್ಷಶಿಕ್ಷಣ ಟ್ರಸ್ಟ್ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ನೂರಾರು ಶಿಷ್ಯರನ್ನು ರೂಪಿಸಿದ್ದರು. ಮಣ್ಣಿನ ಗಣಪತಿ ಮೂರ್ತಿ ನಿರ್ಮಾಣದಲ್ಲೂ ಇವರು ಸಿದ್ಧಹಸ್ತರಾಗಿದ್ದರು.
ಇವರ ಗಣನೀಯ ಸೇವೆಯನ್ನು ಗುರುತಿಸಿ ಸಂಸ್ಥೆಯು 'ಯಕ್ಷಗಾನ ಕಲಾರಂಗ ಪ್ರಶಸ್ತಿ' ನೀಡಿ ಗೌರವಿಸಿತ್ತು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗ ಮತ್ತು ಶಿಷ್ಯವೃಂದವನ್ನು ಅಗಲಿದ್ದಾರೆ. ಕೃಷ್ಣಸ್ವಾಮಿ ಜೋಯಿಸ್ ಅವರ ನಿಧನಕ್ಕೆ ಯಕ್ಷಗಾನ ಕಲಾರಂಗ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಳಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
Kshetra Samachara
04/08/2026 05:54 pm
LOADING...