ಕಾಪು: ಬಿಲ್ಲವರ ಯೂನಿಯನ್ ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಎರ್ಮಾಳು ಬಡಾ, ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆ, ಬೈದಶ್ರೀ ಮಹಿಳಾ ಮಂಡಳಿ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಎರ್ಮಾಳಿನಲ್ಲಿ ಸಾಂಪ್ರದಾಯಿಕ 'ಕಂಡಡೊಂಜಿ ದಿನ' ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ತುಳು ಸಿನಿಮಾ ಹಾಸ್ಯನಟ ಭೋಜರಾಜ್ ವಾಮಂಜೂರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಗ್ರಾಮೀಣ ಬದುಕಿನ ಅರಿವು ಮತ್ತು ನಮ್ಮ ಸಂಸ್ಕೃತಿಯ ಮೌಲ್ಯಗಳು ಯುವ ಪೀಳಿಗೆಗೆ ತಲುಪಲು ಕಂಡಡೊಂಜಿ ದಿನದಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ. ಇದೇ ರೀತಿಯಲ್ಲಿ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಬೇಕು" ಎಂದು ಹೇಳಿದರು.
ತುಳುನಾಡಿನ 'ನವರಸ ರಾಜ' ಎಂದೇ ಖ್ಯಾತರಾದ ಭೋಜರಾಜ್ ವಾಮಂಜೂರು ಹಾಗೂ ಅವರ ಪತ್ನಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಹಿರಿಯರು ಹಾಗೂ ಕಿರಿಯರು ಕೆಸರಿನ ಗದ್ದೆಯಲ್ಲಿ ಆಟವಾಡಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ದೃಶ್ಯ ಎಲ್ಲರ ಗಮನ ಸೆಳೆಯಿತು.
ವೇದಿಕೆಯಲ್ಲಿ ಎರ್ಮಾಳು ಬಡಾ ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಪ್ರಧಾನ ಅರ್ಚಕ ಸದಾನಂದ ನಾಯ್ಗ, ಎರ್ಮಾಳು ಬಡಾ ಬಿಲ್ಲವ ಯೂನಿಯನ್ ಅಧ್ಯಕ್ಷ ಸುಖೇಶ್ ಕುಮಾರ್, ನಂದಿಕೇಶ್ವರ ದೇವಳದ ಅರ್ಚಕ ಬಾಲಕೃಷ್ಣ ಭಟ್, ಉಚ್ಚಿಲ ಬಿಲ್ಲವ ಸಂಘದ ಅಧ್ಯಕ್ಷ ಯು. ಸದಾಶಿವ ಪೂಜಾರಿ, ಕೋಟಿ ಚೆನ್ನಯ ಯುವ ಬಿಲ್ಲವ ಸಂಘಟನೆಯ ಅಧ್ಯಕ್ಷ ಸತೀಶ್ ಪೂಜಾರಿ ಮೂಡಬೆಟ್ಟು, ಬೈದಶ್ರೀ ಮಹಿಳಾ ಮಂಡಳಿಯ ಅಧ್ಯಕ್ಷೆ ಸಬಿತಾ ಸೋಮನಾಥ್, ಶಂಕರ ಪೂಜಾರಿ, ಕರುಣಾಕರ ಕೋಟ್ಯಾನ್ ಹಾಗೂ ರಮೇಶ್ ಅಂಚನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
PublicNext
03/08/2026 08:54 am
LOADING...