ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರುಕುಲದಲ್ಲೊಂದು ಆಟಿ ಸಸ್ಯಾಮೃತ – ಆರೋಗ್ಯ, ಸಂಸ್ಕೃತಿ ಮತ್ತು ಪರಂಪರೆಯ ಸಂಗಮ

ಕುಂದಾಪುರ: ಕರಾವಳಿ ಮತ್ತು ಮಲೆನಾಡಿನ ಜನರ ಬದುಕಿನಲ್ಲಿ ಆಟಿ ಅಥವಾ ಆಷಾಢ ತಿಂಗಳು ವಿಶೇಷ ಮಹತ್ವ ಹೊಂದಿರುವ ಕಾಲ. ಈ ಅವಧಿಯಲ್ಲಿ ಪ್ರಕೃತಿಯಲ್ಲಿ ದೊರೆಯುವ ಔಷಧೀಯ ಸೊಪ್ಪು, ತರಕಾರಿ, ಬೇರು, ಬಳ್ಳಿ ಹಾಗೂ ಕಾಡುಸಸ್ಯಗಳಿಂದ ತಯಾರಿಸಲಾದ ಆಹಾರವನ್ನು ಸೇವಿಸುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ 31 ಬಗೆಯ ವಿಶೇಷ ಆಹಾರ ಪದಾರ್ಥಗಳನ್ನು ಒಳಗೊಂಡ "ಸಸ್ಯಾಮೃತ" ಕಾರ್ಯಕ್ರಮವನ್ನು ಕುಂದಾಪುರ ತಾಲೂಕಿನ ವಕ್ವಾಡಿಯ ಗುರುಕುಲ ಶಿಕ್ಷಣ ಸಂಸ್ಥೆ ಆಗಸ್ಟ್ 2ರಂದು ಆಯೋಜಿಸಿತು.

ಈ ಕಾರ್ಯಕ್ರಮದಲ್ಲಿ ಬಸ್ರೂರಿನ ಮಹಾಬಲ ಹರಿಕಾರ್ ಮತ್ತು ತಂಡ ಜೊತೆಯಾಗಿ 31 ಬಗೆಯ ಔಷಧೀಯ ಆಹಾರ ಪದಾರ್ಥಗಳನ್ನು ಪ್ರದರ್ಶಿಸುವುದರ ಜೊತೆಗೆ ಮಧ್ಯಾಹ್ನ ಸಹ ಭೋಜನ ಕೂಟ ನಡೆಯಿತು. ವಿವಿಧ ಸೊಪ್ಪುಗಳು, ಬೇರುಗಳು, ಬಳ್ಳಿಗಳು, ಕಾಡು ತರಕಾರಿಗಳು ಹಾಗೂ ಸಾಂಪ್ರದಾಯಿಕ ಆಹಾರಗಳಿಂದ ತಯಾರಿಸಲಾದ ಈ ತಿನಿಸುಗಳು ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ. ಪ್ರತಿಯೊಂದು ಆಹಾರದ ಹಿಂದೆ ಇರುವ ಔಷಧೀಯ ಗುಣ, ಪೌಷ್ಟಿಕಾಂಶ ಹಾಗೂ ಆರೋಗ್ಯದ ಮಹತ್ವವನ್ನು ಡಾ. ವಾಣಿಶ್ರೀ ಐತಾಳ್ ವಿವರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಕುಲ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ವಹಿಸಿದ್ದರು.

ಆಧುನಿಕ ಜೀವನಶೈಲಿಯಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿಗಳು ನಿಧಾನವಾಗಿ ಮರೆಯಾಗುತ್ತಿರುವ ಸಂದರ್ಭದಲ್ಲಿ, ಆಟಿ ಸಸ್ಯಾಮೃತದಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿ, ಆರೋಗ್ಯ ಹಾಗೂ ಪ್ರಕೃತಿಯ ಮಹತ್ವವನ್ನು ನೆನಪಿಸುತ್ತಿವೆ. ಪುಸ್ತಕಗಳ ಜೊತೆಗೆ ಬದುಕಿನ ಮೌಲ್ಯಗಳನ್ನು ಕಲಿಸುವ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿವೆ. ಆಟಿ ತಿಂಗಳ ಈ ಆರೋಗ್ಯ ಸಂಸ್ಕೃತಿ ಮುಂದಿನ ಪೀಳಿಗೆಯಲ್ಲೂ ಮುಂದುವರಿಯಲಿ ಎಂಬ ಆಶಯ ನಮ್ಮದು.

ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್, ಕುಂದಾಪುರ

Edited By :
PublicNext

PublicNext

03/08/2026 12:05 pm

Cinque Terre

14.66 K

Cinque Terre

0

ಸಂಬಂಧಿತ ಸುದ್ದಿ