ಬೆಂಗಳೂರು: ಬ್ಯಾಟರಾಯನಪುರದ ಐಟಿಐ ಲೇಔಟ್‌ನಲ್ಲಿ ಭಿಕ್ಷಾಟನೆ ನಡೆಸುತ್ತಿದ್ದ ಉತ್ತರ ಪ್ರದೇಶ ಮೂಲದ ಮುಖೇಶ್ ಎಂಬ ಯುವಕನ ನೈಜ ಬಣ್ಣ ಬಯಲಾಗಿದೆ. ಕೈ-ಕಾಲುಗಳು ಸಂಪೂರ್ಣವಾಗಿ ಚೆನ್ನಾಗಿದ್ದರೂ, ಶೋಕಿ ಜೀವನ ಹಾಗೂ ಸುಲಭವಾಗಿ ಹಣ ಗಳಿಸುವ ದುರಾಶೆಯಿಂದ ಈತ ಮನಕಲುಕುವಂತೆ ಕುಂಟುತ್ತಾ ಅಂಗವಿಕಲನ ರೀತಿ ನಟಿಸಿ ಜನರನ್ನು ವಂಚಿಸುತ್ತಿದ್ದ.
ಐಷಾರಾಮಿ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ ಈತನ ಚಲನವಲನದ ಬಗ್ಗೆ ಸ್ಥಳೀಯರಿಗೆ ಅನುಮಾನ ಮೂಡಿ ತರಾಟೆಗೆ ತೆಗೆದುಕೊಂಡಾಗ ಈತನ ಅಸಲಿಯತ್ತು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಈತನ ಬಳಿ ನೀರಜ್ ಎಂಬುವವರಿಗೆ ಸೇರಿದ ಕಳುವಾದ ಐಫೋನ್ ಪತ್ತೆಯಾಗಿದೆ.
ತಕ್ಷಣವೇ ಸ್ಥಳೀಯರು ಬ್ಯಾಟರಾಯನಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಆತನನ್ನು ಸುಮನಹಳ್ಳಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿಸಲಾಗಿದೆ. ದೇಹದಾರ್ಢ್ಯವಿದ್ದರೂ ಶೋಕಿ ಜೀವನಕ್ಕಾಗಿ ಭಿಕ್ಷಾಟನೆ ಹಾಗೂ ಕಳ್ಳತನಕ್ಕಿಳಿದ ಯುವಕನ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
29/07/2026 12:25 pm
LOADING...