ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಾಥ ವಾಹನಗಳನ್ನು ನಿಲ್ಲಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದರಂತೆ ಸ್ಥಳ ಗುರುತಿಸಿ - ಆಯುಕ್ತ ಕೆ.ಎನ್. ರಮೇಶ್

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಹಾಗೂ ಇಂಜಿನಿಯರಿಂಗ್ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ಆಯುಕ್ತರಾದ ಕೆ.ಎನ್. ರಮೇಶ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಆಯುಕ್ತರು, ಪಾಲಿಕೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ನಿಯಮಾನುಸಾರ ಬಜೆಟ್ ಹಂಚಿಕೆಗೆ ಅನುಗುಣವಾಗಿಯೇ ಕಾರ್ಯಯೋಜನೆ ರೂಪಿಸುವಂತೆ ಸೂಚಿಸಿದರು. ಆ ಕಾಮಗಾರಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತ ನಂತರವೇ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳುವಂತೆ ಎಲ್ಲಾ ವಿಭಾಗದ ಅಭಿಯಂತರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಹಿಂದಿನ ವರ್ಷಗಳಿಂದ ಬಾಕಿ ಉಳಿದಿರುವ (ಸ್ಪಿಲ್ ಓವರ್) ಕಾಮಗಾರಿಗಳು, ಪ್ರಸ್ತುತ ಚಾಲ್ತಿಯಲ್ಲಿರುವ ಕಾಮಗಾರಿಗಳು ಹಾಗೂ ಈಗಾಗಲೇ ಮುಕ್ತಾಯಗೊಂಡಿರುವ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಮತ್ತು ಈಗಾಗಲೇ ಆಡಳಿತಾತ್ಮಕ ಅನುಮೋದನೆ ಪಡೆದಿರುವ ಕಾಮಗಾರಿಗಳಿಗೆ ಆದ್ಯತೆಯ ಮೇರೆಗೆ ಟೆಂಡರ್ ಕರೆಯುವಂತೆ ಅಭಿಯಂತರರಿಗೆ ಸೂಚನೆ ನೀಡಿದರು.

ಬಾಕಿ ಬಿಲ್‌ಗಳ ವಿಲೇವಾರಿ ಹಾಗೂ ಆರ್ಥಿಕ ಶಿಸ್ತಿಗೆ ನಿರ್ದೇಶನ:

ಪೂರ್ಣಗೊಂಡಿರುವ ಕಾಮಗಾರಿಗಳ ಬಾಕಿ ಬಿಲ್‌ಗಳ ಪಾವತಿ ವಿಚಾರದಲ್ಲಿ ಜ್ಯೇಷ್ಠತೆಯ ಆಧಾರವನ್ನು ಕಡ್ಡಾಯವಾಗಿ ಪಾಲಿಸಬೇಕು, ಹಂತ ಹಂತವಾಗಿ ಬಾಕಿ ಬಿಲ್‌ಗಳನ್ನು ವಿಲೇವಾರಿ ಮಾಡಲು ಪಟ್ಟಿ ಸಿದ್ಧಪಡಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಅನುಮೋದಿತ ಬಜೆಟ್ ಮೀರಿದ ವೆಚ್ಚಗಳಿಗೆ ಅವಕಾಶ ನೀಡದೆ ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.

ಅನಾಥ ವಾಹನಗಳನ್ನು ನಿಲ್ಲಿಸಲು ಸ್ಥಳ ಗುರುತಿಸಿ ಫೆನ್ಸಿಂಗ್ ಮಾಡಿ:

ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸಲಾದ ಅನಾಥ ವಾಹನಗಳನ್ನು ನಿಲ್ಲಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದರಂತೆ ಹೆಚ್ಚುವರಿ ಸ್ಥಳ ಗುರುತಿಸಲು ಹಾಗೂ ಆ ಸ್ಥಳಗಳಲ್ಲಿ ಸೂಕ್ತ ರಕ್ಷಣೆಗಾಗಿ ತಂತಿಬೇಲಿ ನಿರ್ಮಿಸಿ ಸಂಚಾರ ಪೊಲೀಸ್ ವಿಭಾಗಕ್ಕೆ ಮಾಹಿತಿ ನೀಡುವಂತೆ ಅಭಿಯಂತರರಿಗೆ ಆಯುಕ್ತರು ಸೂಚಿಸಿದರು.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಮಾನ್ಯ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಆಗಸ್ಟ್ 1 ರಿಂದ ಹಮ್ಮಿಕೊಳ್ಳಲಾಗುತ್ತಿರುವ “ತ್ಯಾಜ್ಯದಿಂದ ಸ್ವಾತಂತ್ರ್ಯ” ಅಭಿಯಾನದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವಂತಹ ಕಟ್ಟಡ ತ್ಯಾಜ್ಯ ಮತ್ತು ಹೂಳುಗಳನ್ನು ತೆರವುಗೊಳಿಸುವ ಸಂಬಂಧ ವಾಹನ ವ್ಯವಸ್ಥೆ ಸೇರಿದಂತೆ ಪೂರ್ವಸಿದ್ದತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಈ ವೇಳೆ ಮುಖ್ಯ ಅಭಿಯಂತರರಾದ ಶ್ರೀ ಬಸವರಾಜ್ ಕಬಾಡೆ, ಶ್ರೀ ಕೆ.ವಿ. ರವಿ, ಹಣಕಾಸು ವಿಭಾಗದ ಉಪನಿಯಂತ್ರಕರಾದ ಶ್ರೀಮತಿ ತನುಜಾ, ಎಲ್ಲಾ ಕಾರ್ಯಪಾಲಕ ಅಭಿಯಂತರರು ಮತ್ತು ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

30/07/2026 09:36 pm

Cinque Terre

7.92 K

Cinque Terre

0

ಸಂಬಂಧಿತ ಸುದ್ದಿ