ಹಿರಿಯೂರು: ತಾಲೂಕಿನ ಹೊಸಯಲನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೂರು ಗ್ರಾಮದ ಕಮ್ಮಾರ ಬೀದಿಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರು ದಿನನಿತ್ಯ ನೀರಿಗಾಗಿ ಪರದಾಡುವಂತಾಗಿದೆ. ಮನೆ ಮನೆಗೆ ಗಂಗೆ ಯೋಜನೆಯಡಿ ಪ್ರತಿ ಮನೆಗೂ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗಿದ್ದರೂ, ಕಮ್ಮಾರ ಬೀದಿಯ ನಿವಾಸಿಗಳಿಗೆ ಇದುವರೆಗೆ ಹನಿ ನೀರೂ ತಲುಪಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಇತರ ಬೀದಿಗಳಿಗೆ ನಿಯಮಿತವಾಗಿ ನೀರು ಸರಬರಾಜಾಗುತ್ತಿದ್ದರೂ, ಕಮ್ಮಾರ ಬೀದಿಯಲ್ಲಿ ಮಾತ್ರ ನೀರು ಬರುತ್ತಿಲ್ಲ. ಪೈಪ್‌ಲೈನ್ ಸಂಪರ್ಕದಲ್ಲಿ ಎಲ್ಲಾದರೂ ತಾಂತ್ರಿಕ ದೋಷ ಅಥವಾ ಸಂಪರ್ಕ ಕಡಿತವಾಗಿರುವ ಸಾಧ್ಯತೆ ಇದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಕುರಿತು ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಿಲ್ಲ. ತಕ್ಷಣ ಪೈಪ್‌ಲೈನ್ ಪರಿಶೀಲನೆ ನಡೆಸಿ ಕಮ್ಮಾರ ಬೀದಿಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಸ್ಥಳೀಯರು ಹೋರಾಟದ ಎಚ್ಚರಿಕೆ ನೀಡಿರುವುದಲ್ಲದೇ ಮುಂಬರುವ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಆಗ್ರಹಿಸಿದ್ದಾರೆ.
PublicNext
01/08/2026 07:46 am