ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಬಳ್ಳಾರಿ ಟು ಚಿಕ್ಕಜಾಜೂರು ದ್ವಿಪಥ ರೈಲ್ವೆ ಮಾರ್ಗ ಕಾಮಗಾರಿ ಆರಂಭಕ್ಕೆ ಇಲಾಖೆ ಸಜ್ಜಾಗಿದ್ದು, ಕಳೆದ ಒಂದು ವರ್ಷದಿಂದ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. 185 ಕಿಲೋ ಮೀಟರ್ ದೂರದ ರೈಲ್ವೇ ಡಬ್ಲಿಂಗ್ ಕಾಮಗಾರಿ ಇದಾಗಿದ್ದು, ಅಂದಾಜು 3 ಸಾವಿರ ಕೋಟಿ ವೆಚ್ಚದಲ್ಲಿ ದ್ವಿಪಥ ಮಾರ್ಗಕ್ಕೆ ರೈಲ್ವೇ ಇಲಾಖೆ ಮುಂದಾಗಿದೆ.
ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ ಈ ಭಾಗದ ಬಹುತೇಕ ಜಮೀನಿಗಳನ್ನು ಭೂ ಸ್ವಾಧೀನ ಮಾಡಿಕೊಳ್ಳಲು, ಚಿತ್ರದುರ್ಗ ವಿಶೇಷ ಭೂಸ್ವಾಧೀನ ಇಲಾಖೆ ಮುಂದಾಗಿದೆ. ಅಲ್ಲದೇ ರೈತರಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಇದು ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಲಕ್ಷಾಂತರ ಬೆಲೆ ಬಾಳುವ ಅಡಿಕೆ ತೋಟಗಳಿಗೆ ಕೇವಲ ಎಕರೆಗೆ 4 ಲಕ್ಷ ರೂಪಾಯಿ ಪರಿಹಾರಕ್ಕೆ ರೈಲ್ವೇ ಇಲಾಖೆ ಮುಂದಾಗಿದ್ದು, ಇದು ಸಾಲಸೋಲ ಮಾಡಿ ತೋಟ ಕಟ್ಟಿದ್ದ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಂದವಾಡಿ, ಸಾದರಹಳ್ಳಿ, ಮಾಕುಂಟೆ ಸೇರಿದಂತೆ ಹತ್ತಾರು ಗ್ರಾಮಗಳ ಮೂಲಕ ಡಬ್ಲಿಂಗ್ ರೈಲ್ವೇ ಮಾರ್ಗ ಹಾದು ಹೋಗುತ್ತಿದ್ದು, ಸೂಕ್ತ ಪರಿಹಾರಕ್ಕೆ ರೈತರು ಒತ್ತಾಯಿಸಿದ್ದಾರೆ. ರೈಲ್ವೇ ಇಲಾಖೆ ಮಾತ್ರ ಒಂದು ಎಕರೆ ಜಮೀನಿಗೆ ಲಕ್ಷ ಹಣ ಫಿಕ್ಸ್ ಮಾಡಿದ್ದು, ಇಲ್ಲಿ ಭೂಮಿಗೆ ಬಂಗಾರದ ಬೆಲೆಯೇ ಇದೆ. ಅಡಿಕೆ ತೋಟಗಳೇ ಹೆಚ್ಚು ಇರುವ ಈ ಭಾಗದಲ್ಲಿ 1ಎಕರೆಗೆ 50 ಲಕ್ಷಕ್ಕೂ ಹೆಚ್ಚಿನ ಬೆಲೆ ಇದೆ.
ಆದ್ರೆ ರೈಲ್ವೇ ಅಧಿಕಾರಿಗಳು ಮಾತ್ರ ಕೇವಲ 4 ಲಕ್ಷ ಹಣ ನಿಗದಿ ಮಾಡಿದ್ದು, ಅನ್ನದಾತರಿಗೆ ದಿಕ್ಕು ತೋಚದಂತಾಗಿದೆ. ಇದೇ ಕಾರಣಕ್ಕೆ ವಿವಿಧ ಗ್ರಾಮಗಳ ರೈತರು ಚಿತ್ರದುರ್ಗ ಜಿಲ್ಲಾಧಿಕಾರಿ ಮುಂಭಾಗ ಪ್ರತಿಭಟನೆ ನಡೆಸುವ ಮೂಲಕ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಒಟ್ಟಾರೆ ರೈಲ್ವೇ ಕಾಮಗಾರಿಯ ಹೆಸರಲ್ಲಿ ಲಕ್ಷ ಲಕ್ಷ ಬೆಲೆ ಬಾಳುವ ಭೂಮಿಗಳಿಗೆ ಸಣ್ಣ ಪ್ರಮಾಣದ ಪರಿಹಾರ ಕೊಟ್ಟು ರೈಲ್ವೇ ಇಲಾಖೆ ಕೈ ತೊಳೆದುಕೊಳ್ಳೋದಕ್ಕೆ ಮುಂದಾಗಿದೆ. ಇದನ್ನು ಚಿತ್ರದುರ್ಗ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಅನ್ನದಾತರ ನೆರವಿಗೆ ಧಾವಿಸಬೇಕು, ಸೂಕ್ತ ಪರಿಹಾರ ಕೊಡಿಸ್ಬೇಕು ಅನ್ನೋದು ರೈತರ ಆಗ್ರಹವಾಗಿದೆ.
PublicNext
01/08/2026 01:28 pm
LOADING...