ಕಲಬುರಗಿ: ಕಳೆದ ಜುಲೈ 14ರಂದು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾಗಿದ್ದ ಪ್ರಕರಣದ ಬೆನ್ನಲ್ಲೇ, ಜೈಲಿನ ಭದ್ರತಾ ಲೋಪಗಳನ್ನು ಪರಿಶೀಲಿಸಲು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಇಂದು ಕಲಬುರಗಿಗೆ ಭೇಟಿ ನೀಡಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಜೈಲಿನ ಒಳಗೆ ತೆರಳಿದ ಡಿಜಿಪಿ ಅವರು, ಮಧ್ಯಾಹ್ನ 2ರ ವರೆಗೆ ಸುಮಾರು 4 ಗಂಟೆಗಳ ಕಾಲ ಪರಿಶೀಲನೆ ನಡೆಸಿದರು. ಕೈದಿಗಳ ಬ್ಯಾರಕ್, ಜೈಲಿನ ಗೋಡೆ, ತಂತಿ ಬೇಲಿ ಹಾಗೂ ಕೈದಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ ಜಾಗಗಳನ್ನು ಖುದ್ದು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
"ಕಲಬುರಗಿಯಲ್ಲಿ 3 ಮಂದಿ ಕೈದಿಗಳು ಪರಾರಿಯಾಗಿದ್ದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅದರಲ್ಲಿ ಇಬ್ಬರನ್ನು ಈಗಾಗಲೇ ಮತ್ತೆ ಬಂಧಿಸಲಾಗಿದೆ. ಬೀದರ್ ಜಿಲ್ಲೆ ಇಸ್ಲಾಂಪುರ ಗ್ರಾಮದ ಮಸ್ತಾನ್ ಎಂಬಾತ ಇನ್ನೂ ಪತ್ತೆಯಾಗಿಲ್ಲ. ಆತನನ್ನು ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಗಳು ಪ್ರಯತ್ನ ಮುಂದುವರಿಸಿದ್ದಾರೆ" ಎಂದರು.
ಈ ಪ್ರಕರಣ ಸಂಬಂಧ ಜೈಲಿನ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ ಸೇರಿದಂತೆ ಹಲವು ಸಿಬ್ಬಂದಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದು ಡಿಜಿಪಿ ತಿಳಿಸಿದರು.
ರಾತ್ರಿ ಪಾಳಿ ಮಾಡುವ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿರುವುದಾಗಿಯೂ ಹೇಳಿದರು.
ಕಳೆದ 16 ವರ್ಷಗಳ ಅಂಕಿಅಂಶ ಪರಿಶೀಲಿಸಿದಾಗ ಪ್ರತಿ ವರ್ಷವೂ ಕೈದಿಗಳು ತಪ್ಪಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ತಾವೇ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇಲ್ಲಿನ ಮುಖ್ಯ ಅಧೀಕ್ಷಕರೊಬ್ಬರು ವರ್ಗಾವಣೆಯಾಗಿದ್ದಾರೆ. ಅವರ ಬದಲಿಗೆ ಸುರೇಶ್ ಅವರನ್ನು ನೇಮಿಸಲಾಗಿತ್ತು. ಆದರೆ, ಅವರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದು, ಕಳೆದ 4 ತಿಂಗಳಿನಿಂದ ರಜೆಯಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರಾಗೃಹ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ದೊಡ್ಡ ಮಟ್ಟದ ನೇಮಕಾತಿಗೆ ಮುಂದಾಗಿರುವುದಾಗಿ ಡಿಜಿಪಿ ಹೇಳಿದರು. ಸೋಮವಾರ 867 ಸಿಬ್ಬಂದಿ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ. ಅದರಲ್ಲಿ 400 ಹುದ್ದೆಗಳು ಕಲ್ಯಾಣ ಕರ್ನಾಟಕಕ್ಕೇ ಮೀಸಲಾಗಿವೆ. ನೇಮಕಾತಿ ಮತ್ತು ತರಬೇತಿಗೆ 2 ವರ್ಷ ಬೇಕಾಗುವುದರಿಂದ, ಅಲ್ಲಿಯವರೆಗೆ 550 ನಿವೃತ್ತ ಯೋಧರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲು ತೀರ್ಮಾನಿಸಲಾಗಿದೆ. ಆದರೆ, ಈವರೆಗೆ 220 ಮಂದಿ ಮಾತ್ರ ಒಪ್ಪಿಕೊಂಡಿದ್ದಾರೆ. ಬಹುತೇಕರು ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿಯಲ್ಲಿ ಕೆಲಸ ಮಾಡಿದವರು. ಹಾಗಾಗಿ ಅವರು ಬೆಳಗಾವಿ ಬಿಟ್ಟು ಬರಲು ಸಿದ್ಧರಿಲ್ಲ ಎಂದು ತಿಳಿಸಿದರು.
ದಕ್ಷಿಣ ಕರ್ನಾಟಕದ ಅಧಿಕಾರಿಗಳು ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳನ್ನೇ ಬಯಸುತ್ತಿರುವುದರಿಂದ ಕಲಬುರಗಿಗೆ ಪೂರ್ಣಾವಧಿ ಮುಖ್ಯ ಅಧೀಕ್ಷಕರು ಸಿಗುತ್ತಿಲ್ಲ ಎಂದೂ ಡಿಜಿಪಿ ಹೇಳಿದರು.
ಇತ್ತ ಡಿಜಿಪಿ ಭೇಟಿ ವೇಳೆ ಸಂಚಾರ ಪೊಲೀಸರು ಜೈಲಿನ ಬಳಿ ಕೆಲ ಹೊತ್ತು ಝೀರೋ ಟ್ರಾಫಿಕ್ ಮಾಡಿದ್ದರಿಂದ ಜೇವರ್ಗಿ ಕಡೆಯಿಂದ ಬರುತ್ತಿದ್ದ ಬಸ್, ಕಾರು, ಬೈಕ್ ಸವಾರರು ಪರದಾಡಿದರು. ಸಾಮಾನ್ಯವಾಗಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಂತಹ ಗಣ್ಯರು ಬಂದಾಗ ಮಾತ್ರ ಝೀರೋ ಟ್ರಾಫಿಕ್ ಮಾಡಲಾಗುತ್ತದೆ.
ಒಟ್ಟಿನಲ್ಲಿ ಭದ್ರತಾ ಲೋಪ ತಡೆದು, ಸಿಬ್ಬಂದಿ ನೇಮಕಾತಿ ಮೂಲಕ ಕಾರಾಗೃಹ ವ್ಯವಸ್ಥೆಯನ್ನು ಬಲಪಡಿಸುವುದೇ ಇಲಾಖೆಯ ಆದ್ಯತೆ ಎಂದು ಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದರು.
PublicNext
01/08/2026 12:51 pm