ಸಕಲೇಶಪುರ: ಕೃಷಿ ಕ್ಷೇತ್ರದಲ್ಲಿ ನೀರಿನ ಸಮರ್ಪಕ ಬಳಕೆ ಹಾಗೂ ಸೂಕ್ಷ್ಮ ನೀರಾವರಿ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶದಿಂದ 2026–27ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಇತರೆ ಉಪಚಾರ ಕಾರ್ಯಕ್ರಮದಡಿ ಅರ್ಹ ಫಲಾನುಭವಿಗಳಿಗೆ ಸಹಾಯಧನದಲ್ಲಿ ಪಿವಿಸಿ ಪೈಪ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಸಕಲೇಶಪುರ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಯು.ಎಂ. ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.
ಯೋಜನೆಯಡಿ 40 ಎಂಎಂ, 63 ಎಂಎಂ, 75 ಎಂಎಂ ಹಾಗೂ 90 ಎಂಎಂ ಗಾತ್ರದ 4 ಕೆ.ಜಿ. ಸಾಂದ್ರತೆ ಗುಣಮಟ್ಟದ ಪಿವಿಸಿ ಪೈಪ್‌ಗಳು ಸಹಾಯಧನದಲ್ಲಿ ಲಭ್ಯವಿದ್ದು, ಆಸಕ್ತ ರೈತರು ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಕೃಷಿ ಉತ್ಪಾದಕತೆ ಹೆಚ್ಚಿಸುವುದು, ನೀರಿನ ಮಿತವ್ಯಯದ ಬಳಕೆಗೆ ಉತ್ತೇಜನ ನೀಡುವುದು ಹಾಗೂ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಬಗ್ಗೆ ರೈತರಿಗೆ ನಿರಂತರವಾಗಿ ಮಾಹಿತಿ ನೀಡಲಾಗುತ್ತಿದೆ. ಪ್ರತಿಯೊಬ್ಬ ಅರ್ಹ ರೈತರಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬ ಉದ್ದೇಶದಿಂದ ಇಲಾಖೆ ವಿವಿಧ ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಸಕಲೇಶಪುರದಂತಹ ಮಲೆನಾಡು ಪ್ರದೇಶದಲ್ಲಿ ರೈತರು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದು ಆಧುನಿಕ ಕೃಷಿ ಪದ್ಧತಿಗಳನ್ನು ಹೆಚ್ಚು ಅಳವಡಿಸಿಕೊಳ್ಳಬೇಕು. ಕೃಷಿ ಸಂಬಂಧಿತ ಇಲಾಖೆಗಳ ಮಾರ್ಗದರ್ಶನ ಮತ್ತು ಎಲ್ಲಾ ಇಲಾಖೆಗಳ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಕೃಷಿಯನ್ನು ಇನ್ನಷ್ಟು ಲಾಭದಾಯಕವಾಗಿಸಬಹುದು ಎಂದು ಪ್ರಕಾಶ್ ಕುಮಾರ್ ಹೇಳಿದರು.
ರೈತರ ಪರವಾಗಿ ಪಾರದರ್ಶಕ ಆಡಳಿತ, ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಕೃಷಿ ಅಭಿವೃದ್ಧಿಗೆ ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಕೃಷಿ ಇಲಾಖೆ ರೈತರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಪ್ರತಿಯೊಬ್ಬ ಅರ್ಹ ರೈತರಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಕಾರ್ಯನಿರ್ವಹಿಸುತ್ತಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.
PublicNext
01/08/2026 05:32 pm
LOADING...