ಹಾಸನ: ಇತಿಹಾಸ ಪ್ರಸಿದ್ಧ ಬೀಕನಹಳ್ಳಿಯ ಶ್ರೀ ಚೌಡೇಶ್ವರಿ (ಪುರದಮ್ಮ) ದೇವಾಲಯದಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಮಹತ್ವದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ದೊರೆತಿದೆ. ಭಕ್ತರಿಗೆ ಸ್ವಚ್ಛ, ಆರೋಗ್ಯಕರ ಹಾಗೂ ಸುಸಜ್ಜಿತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ದೇವಾಲಯದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಸಾಗುತ್ತಿದ್ದು, ಇದೀಗ ಸುಮಾರು ನಾಲ್ಕು ವರ್ಷಗಳಿಂದ ಸ್ವಚ್ಛಗೊಳಿಸದೇ ಉಳಿದಿದ್ದ ರಕ್ತ ಸಂಗ್ರಹಣಾ ತೊಟ್ಟಿಯ ಶುದ್ಧೀಕರಣ ಕಾರ್ಯವನ್ನು ಆಧುನಿಕ ಹೀರುವ ಯಂತ್ರ (Suction Machine) ಮೂಲಕ ಯಶಸ್ವಿಯಾಗಿ ಕೈಗೊಳ್ಳಲಾಗಿದೆ.
ದೇವಾಲಯದಲ್ಲಿ ನಡೆಯುವ ವಿಶೇಷ ಧಾರ್ಮಿಕ ಆಚರಣೆಗಳ ಹಿನ್ನೆಲೆಯಲ್ಲಿ ರಕ್ತ ಸಂಗ್ರಹವಾಗುವ ತೊಟ್ಟಿಯ ಸ್ವಚ್ಛತೆ ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಇದರಿಂದ ನೈರ್ಮಲ್ಯದ ದೃಷ್ಟಿಯಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇತ್ತು. ಈ ಹಿನ್ನೆಲೆ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಕುಮಾರ್ ಯು.ಎಂ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡದ ಮೂಲಕ ಹೀರುವ ಯಂತ್ರ ಬಳಸಿ ತೊಟ್ಟಿಯಲ್ಲಿದ್ದ ರಕ್ತವನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಟ್ಯಾಂಕ್ ಅನ್ನು ಸಮಗ್ರವಾಗಿ ಸ್ವಚ್ಛಗೊಳಿಸಲಾಯಿತು.
ಕೆಲವು ತಿಂಗಳ ಹಿಂದೆ ದೇವಾಲಯದ ಆಡಳಿತದಲ್ಲಿ ಪಾರದರ್ಶಕತೆ, ಸ್ವಚ್ಛತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನೀಡಿದ್ದ ಭರವಸೆಯಂತೆ ಈಗ ಒಂದೊಂದೇ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳ್ಳುತ್ತಿರುವುದು ಭಕ್ತರಲ್ಲಿ ವಿಶ್ವಾಸ ಮೂಡಿಸಿದೆ.
ಪ್ರತಿನಿತ್ಯ ಹಾಗೂ ವಿಶೇಷ ದಿನಗಳಲ್ಲಿ ಸಾವಿರಾರು ಭಕ್ತರು ಭೇಟಿ ನೀಡುವ ಪುರದಮ್ಮ ದೇವಾಲಯದಲ್ಲಿ ಸ್ವಚ್ಛತೆ ಮತ್ತು ಆರೋಗ್ಯಕರ ವಾತಾವರಣ ಕಾಪಾಡುವುದು ಆಡಳಿತದ ಪ್ರಮುಖ ಆದ್ಯತೆಯಾಗಿದ್ದು, ಇದೇ ಉದ್ದೇಶದಿಂದ ಬಾಕಿ ಉಳಿದಿದ್ದ ಸ್ವಚ್ಛತಾ ಕಾರ್ಯಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುತ್ತಿದೆ.
ದೇವಾಲಯದ ಈ ಕ್ರಮಕ್ಕೆ ಭಕ್ತರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, "ವರ್ಷಗಳ ನಿರ್ಲಕ್ಷ್ಯಕ್ಕೆ ತೆರೆ ಬಿದ್ದು, ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ, ಶೌಚಾಲಯಗಳ ನಿರ್ವಹಣೆ ಸೇರಿದಂತೆ ಇತರೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೂ ಇನ್ನಷ್ಟು ವೇಗ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.
PublicNext
05/08/2026 02:51 pm