ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಹೇಮಾವತಿ ನೀರು ಮೊದಲು ಜಿಲ್ಲೆಯ ರೈತರಿಗೆ - ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹ

ಹಾಸನ: "ನಮ್ಮ ನೀರು – ನಮ್ಮ ಹಕ್ಕು" ಎಂಬ ಘೋಷಣೆಯೊಂದಿಗೆ ಹಾಸನ ಜಿಲ್ಲೆಯ ರೈತರ ಹಿತಾಸಕ್ತಿಯನ್ನು ಕಾಪಾಡುವಂತೆ ಒತ್ತಾಯಿಸಿ, ಗೊರೂರಿನ ಹೇಮಾವತಿ ಜಲಾಶಯದಿಂದ ಜಿಲ್ಲೆಯ ರೈತರಿಗೆ ಮೊದಲ ಆದ್ಯತೆಯಾಗಿ ನೀರು ಹರಿಸುವಂತೆ ಹಾಸನ ಜಿಲ್ಲಾ ರೈತ ಮೋರ್ಚಾ ವತಿಯಿಂದ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಜಿಲ್ಲೆಯ ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯ, ಕೃಷಿ ಚಟುವಟಿಕೆಗಳು ಹಾಗೂ ರೈತರ ಹಿತದೃಷ್ಟಿಯಿಂದ ಎಡದಂಡೆ ಮತ್ತು ಚಂಗರವಳ್ಳಿ ನಾಲೆಗಳಿಗೆ ಹರಿಸಿ, ಸ್ಥಳೀಯ ಕೆರೆ-ಕಟ್ಟೆಗಳನ್ನು ಭರ್ತಿ ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಜಿಲ್ಲೆಯ ರೈತರ ಅಗತ್ಯಗಳನ್ನು ಪೂರೈಸುವ ಮೊದಲು ತಮಿಳುನಾಡಿಗೆ ನೀರು ಹರಿಸಬಾರದು ಎಂಬ ಒತ್ತಾಯವೂ ಮನವಿಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.

ಈ ಸಂದರ್ಭದಲ್ಲಿ ಸಕಲೇಶಪುರ ಶಾಸಕ ಹಾಗೂ ರೈತಪರ ಹೋರಾಟಗಾರ ಸಿಮೆಂಟ್ ಮಂಜು ಅವರು ರೈತರ ಪರವಾಗಿ ಧ್ವನಿಗೂಡಿಸಿ, ಜಿಲ್ಲೆಯ ರೈತರ ಬದುಕು ಮತ್ತು ಕೃಷಿ ಉಳಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ಜಿಲ್ಲೆಯ ರೈತರಿಗೆ ಅಗತ್ಯವಿರುವ ನೀರು ದೊರೆತಾಗ ಮಾತ್ರ ಕೃಷಿ ಚಟುವಟಿಕೆಗಳು ಚೇತರಿಕೆ ಕಾಣಲಿದ್ದು, ರೈತರ ಬದುಕಿಗೆ ಭದ್ರತೆ ಸಿಗಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನವೀನ್, ಜಿಲ್ಲಾ ಅಧ್ಯಕ್ಷ ನಾರಾಯಣಗೌಡ, ಜಿಲ್ಲಾ ಮಹಿಳಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಜಕುಮಾರ್, ಗಿರೀಶ್ ಸೇರಿದಂತೆ ರೈತ ಮೋರ್ಚಾದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ರೈತರ ಹಕ್ಕು ಮತ್ತು ನೀರಿನ ನ್ಯಾಯಯುತ ಹಂಚಿಕೆಗಾಗಿ ಹೋರಾಟ ಮುಂದುವರಿಯಲಿದೆ ಎಂದು ಮುಖಂಡರು ತಿಳಿಸಿದ್ದಾರೆ.

Edited By : Somashekar
PublicNext

PublicNext

05/08/2026 02:47 pm

Cinque Terre

3.9 K

Cinque Terre

0

ಸಂಬಂಧಿತ ಸುದ್ದಿ