ಹಾಸನ: ಬೆಳಗೋಡು–ಹಾಸನ ನಗರವನ್ನು ಸಂಪರ್ಕಿಸುವ ಪ್ರಮುಖ ಕೆರೆ ಏರಿ ರಸ್ತೆಯಲ್ಲಿ ಬೃಹತ್ ಗುಂಡಿ ಬಿದ್ದು, ರಸ್ತೆಯ ಮಧ್ಯಭಾಗ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದಾಗಿ ವಾಹನ ಸವಾರರು,
ಸಾರ್ವಜನಿಕರು ಹಾಗೂ ಸ್ಥಳೀಯ ರೈತರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಮಳೆ ಹೀಗೆಯೇ ಮುಂದುವರಿದರೆ ಕೆರೆ ಏರಿ ಒಡೆಯುವ ಅಪಾಯವಿದ್ದು, ಕೆಳಭಾಗದಲ್ಲಿರುವ ನೂರಾರು ಎಕರೆ ಕೃಷಿ ಜಮೀನು ಜಲಾವೃತಗೊಳ್ಳುವ ಭೀತಿ ಎದುರಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಲೆನಾಡು ರಕ್ಷಣಾ ಸೇನೆಯ ಹಾಸನ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಹೊಸಕೊಪ್ಪಲು, "ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಶಾಶ್ವತ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ಒಂದು ವೇಳೆ ದುರಸ್ತಿ ಕಾರ್ಯ ವಿಳಂಬವಾದರೆ ಕೆರೆ ಏರಿ ಒಡೆದು, ಕೆಳಭಾಗದಲ್ಲಿರುವ ಗದ್ದೆಗಳಿಗೆ ನೀರು ನುಗ್ಗಿ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಲಿದೆ" ಎಂದು ಎಚ್ಚರಿಸಿದ್ದಾರೆ.
ರಸ್ತೆಯ ಮಧ್ಯಭಾಗದಲ್ಲಿ ಬೃಹತ್ ಗುಂಡಿ ಬಿದ್ದಿರುವುದರಿಂದ, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ರಸ್ತೆ ಕಾಣಿಸದೆ ಗಂಭೀರ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಸಾರ್ವಜನಿಕರ ಜೀವ ಸುರಕ್ಷತೆ, ರೈತರ ಹಿತಾಸಕ್ತಿ ಹಾಗೂ ಕೃಷಿ ಭೂಮಿಯ ರಕ್ಷಣೆಯ ದೃಷ್ಟಿಯಿಂದ ಸಂಬಂಧಪಟ್ಟ ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಕೆರೆ ಏರಿ ಮತ್ತು ರಸ್ತೆಯನ್ನು ಪುನರ್ನಿರ್ಮಿಸಿ ಬಲಪಡಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Kshetra Samachara
25/07/2026 11:03 am
LOADING...