ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ರೈತರಿಂದ ಹೆದ್ದಾರಿ ತಡೆ!

ಮೈಸೂರು: ಕಾವೇರಿ ನೀರಾವರಿ ನಿಯಂತ್ರಣ ಸಮಿತಿಯ ಅವೈಜ್ಞಾನಿಕ ಆದೇಶ ಖಂಡಿಸಿ ಹಾಗೂ ಮಳೆ ಇಲ್ಲದೆ ಒಣಗಿದ ಬೆಳೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಕೆ.ಆರ್. ಪುರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಾಡ್ಯ ರವಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ರೈತರು ಮಳೆ ಇಲ್ಲದೆ ಒಣಗಿದ ಜೋಳದ ಬೆಳೆಯನ್ನು ರಸ್ತೆಗೆ ತಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಾಡ್ಯ ರವಿ, "ಪ್ರತಿದಿನ 15 ದಿನಗಳ ಕಾಲ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಕಾವೇರಿ ನೀರಾವರಿ ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು. ತಮಿಳುನಾಡಿಗೆ ನೀರು ಹರಿಸಬೇಕೆಂದು ಅವೈಜ್ಞಾನಿಕ ಆದೇಶ ನೀಡಿರುವುದು ಖಂಡನೀಯ. ನಮ್ಮಲ್ಲಿ ಈಗ 52 ಅಡಿ ನೀರು ಮಾತ್ರ ಶೇಖರಣೆಯಾಗಿದೆ, ನಿಜವಾಗಿ 95 ಅಡಿ ನೀರು ಇರಬೇಕಿತ್ತು. ಮಳೆ ಇಲ್ಲದೆ ಅಣೆಕಟ್ಟುಗಳು, ಜಲಾಶಯಗಳು ಖಾಲಿಯಾಗಿವೆ. ಕೆರೆಗಳನ್ನು ತುಂಬಿಸದೆ ಎಲ್ಲಾ ಕೆರೆಗಳು ಬತ್ತಿ ಹೋಗಿದ್ದು, ಇದರಿಂದ ಕವಲಂದೆ ಭಾಗದಲ್ಲಿ ಭೀಕರ ಬರ ಆವರಿಸಿದೆ," ಎಂದು ತಿಳಿಸಿದರು.

ಮುಂದುವರಿದು ಮಾತನಾಡಿದ ಅವರು, "ರೈತರು ಬೆಳೆದಿದ್ದ ಕಬ್ಬು, ಬಾಳೆ, ಜೋಳ, ಅಲಸಂದೆ, ಅವರೆ ಸೇರಿದಂತೆ ಎಲ್ಲಾ ಬೆಳೆಗಳು ಒಣಗುತ್ತಿವೆ. ತಮಿಳುನಾಡಿಗೆ ನೀರು ಹರಿಸಿ ಸರ್ಕಾರ ರೈತರ ಸಮಾಧಿ ಮಾಡುತ್ತಿದೆ. ಮುಖ್ಯಮಂತ್ರಿಗಳು ಬಂದು 2 ತಿಂಗಳಾಯಿತು, ಅವರು ಬರ ಅಧ್ಯಯನ ಮಾಡಬೇಕಿತ್ತು ಹಾಗೂ ಕಾವೇರಿ ನೀರಾವರಿ ನಿರ್ವಹಣಾ ಪ್ರಾಧಿಕಾರಕ್ಕೆ ಸರಿಯಾದ ಮಾರ್ಗದರ್ಶನ ಮಾಡಬೇಕಿತ್ತು. ಆದರೆ ರೈತರನ್ನು ರಸ್ತೆಯಲ್ಲಿ ಕೂರಿಸುವ ಪರಿಸ್ಥಿತಿಗೆ ತಂದ ಸರ್ಕಾರಕ್ಕೆ ಧಿಕ್ಕಾರ. ಮೈಸೂರು ಜಿಲ್ಲೆಯಾದ್ಯಂತ 55 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. ಇದನ್ನು ಬಿಟ್ಟು ದೆಹಲಿಗೆ ತೆರಳಿ ಸಚಿವ ಸ್ಥಾನ ಕೇಳುತ್ತಿರುವುದು ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು. ಇದು ಆಡಳಿತದ ಸಂಪೂರ್ಣ ವೈಫಲ್ಯ," ಎಂದು ಟೀಕಿಸಿದರು.

ಅಚ್ಚುಕಟ್ಟು ಪ್ರದೇಶದ ಬೆಳೆಗಳು ಒಣಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ನಂಜನಗೂಡು-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದ ಪರಿಣಾಮವಾಗಿ ವಾಹನಗಳು ಸಾಲುಗಟ್ಟಿ ನಿಂತು, ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ವಾಹನ ಸವಾರರು ಮತ್ತು ಪ್ರಯಾಣಿಕರು ತೀವ್ರ ಪರದಾಡುವಂತಾಯಿತು.

ಈ ಪ್ರತಿಭಟನೆಯಲ್ಲಿ ರಾಜ್ಯ ಖಜಾಂಚಿ ಮಲೆಯೂರು ಹರ್ಷ, ಜಿಲ್ಲಾ ಉಪಾಧ್ಯಕ್ಷ ಕೊಂತಯ್ಯನಹುಂಡಿ ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೀರಮ್ಮನಹಳ್ಳಿ ಕುಮಾರ್, ಅರಳಿಕಟ್ಟೆ ಕುಮಾರ್, ತಾಲೂಕು ಕಾರ್ಯದರ್ಶಿ ಮೂರ್ತಿ, ಸಂಘಟನಾ ಕಾರ್ಯದರ್ಶಿ ತಗಡೂರು ನಾಗೇಶ್, ಘಟಕದ ಅಧ್ಯಕ್ಷರಾದ ಲೋಕೇಶ್, ಉಮೇಶ್, ಸಿದ್ದಪ್ಪ, ಸಿದ್ದು, ಮಂಜು, ಕುಮಾರ್, ತೊರವಳ್ಳಿ ಗಣೇಶ್, ಮಹೇಶ್, ಶಿವಬುದ್ಧಿ, ಗುರು, ಬಸವಣ್ಣ, ಚಿನ್ನಸ್ವಾಮಿ, ನಟರಾಜು ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

"ಆಗಸ್ಟ್ 3ರವರೆಗೆ ಕಾದು ನೋಡುತ್ತೇವೆ. ರಾಜ್ಯ ಸರ್ಕಾರ ತರಾತುರಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆ. 3ರ ಪರಿಸ್ಥಿತಿ ನೋಡಿಕೊಂಡು ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಂಪೂರ್ಣ ಬಂದ್ ಮಾಡುತ್ತೇವೆ. ನೀರು ನಿಲ್ಲಿಸುವವರೆಗೂ ಹೋರಾಟ ನಿಲ್ಲುವುದಿಲ್ಲ. ನಮ್ಮ ಗ್ರಾಮಗಳಿಗೆ ಬರುವ ಶಾಸಕರು ಮತ್ತು ಸಂಸದರಿಗೆ ತಕ್ಕ ಪಾಠ ಕಲಿಸುತ್ತೇವೆ," ಎಂದು ಹಾಡ್ಯ ರವಿ ಎಚ್ಚರಿಕೆ ನೀಡಿದ್ದಾರೆ.

Edited By : Somashekar
PublicNext

PublicNext

01/08/2026 05:48 pm

Cinque Terre

8.24 K

Cinque Terre

0

ಸಂಬಂಧಿತ ಸುದ್ದಿ