ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಡಿಐಟಿ ಪ್ರಾಧ್ಯಾಪಕರಿಗೆ ಎರಡು ಪೇಟೆಂಟ್ ಮಂಜೂರು: ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ!

ಅಳ್ನಾವರ/ಹಳಿಯಾಳ: ಸಮೀಪದ ಹಳಿಯಾಳದ ಕೆಎಲ್‌ಎಸ್ ವಿಡಿಐಟಿ (KLS VDIT) ಇಂಜಿನಿಯರಿಂಗ್ ಮಹಾವಿದ್ಯಾಲಯದ ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಪ್ರಾಧ್ಯಾಪಕರ ಸಂಶೋಧನಾ ಕಾರ್ಯಗಳಿಗೆ ಎರಡು ಪೇಟೆಂಟ್‌ಗಳು ಮಂಜೂರಾಗಿದ್ದು, ಮಹಾವಿದ್ಯಾಲಯದ ಸಂಶೋಧನಾ ಕ್ಷೇತ್ರಕ್ಕೆ ಮತ್ತೊಂದು ಹಿರಿಮೆ ಪಾತ್ರವಾಗಿದೆ.

ಮೆಕ್ಯಾನಿಕಲ್ ವಿಭಾಗದ ಡಾ. ಶಂಕರ್ ಬಡಿಗೇರ್, ಡಾ. ಶೈಲೇಶ್ ಚನ್ನಪಟ್ಟಣ, ಡಾ. ಗುರುರಾಜ್ ಹತ್ತಿ, ಪ್ರೊ. ರವಿಕುಮಾರ್ ತಲಪಾಟಿ, ಪ್ರೊ. ರಜತ್ ಆಚಾರ್ಯ, ಪ್ರೊ. ದೀಪಕ್ ಲೋಕರೆ, ಪ್ರೊ. ನವೀನ್ ಹಿರೇಮಠ ಹಾಗೂ ಶ್ರೀಮತಿ ರಶ್ಮಿ ಮೇಲಿನಮನಿ ಅವರ "Tea Cup and Wick Type Floating Solar Still" ಸಂಶೋಧನೆಗೆ ಪೇಟೆಂಟ್ ಮಂಜೂರಾಗಿದೆ. ಸೌರಶಕ್ತಿಯ ನೆರವಿನಿಂದ ಉಪ್ಪು ನೀರು ಹಾಗೂ ಅಶುದ್ಧ ನೀರನ್ನು ಶುದ್ಧ ಕುಡಿಯುವ ನೀರಾಗಿ ಪರಿವರ್ತಿಸುವ ಈ ಸಾಧನದಲ್ಲಿ 'ವಿಕ್ ತಂತ್ರಜ್ಞಾನ'ವು ನೀರನ್ನು ಹೆಚ್ಚಿನ ಮೇಲ್ಮೈಯಲ್ಲಿ ಹರಡಿ ಆವಿಯಾಗುವಿಕೆಯನ್ನು ಹೆಚ್ಚಿಸುತ್ತದೆ. ತೇಲುವ ವಿನ್ಯಾಸದಿಂದ ನೀರಿನ ಮೂಲವನ್ನೇ ಬಳಸುವ ಕಾರಣ ಸಾಧನದ ಕಾರ್ಯಕ್ಷಮತೆಯೂ ಹೆಚ್ಚುತ್ತದೆ. ಈ ಪೇಟೆಂಟ್‌ಗೆ 2024ರ ಜುಲೈನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಡಾ. ಪ್ಲಾಸಿನ್ ಡಯಾಸ್, ಪ್ರೊ. ರೋಹಿಣಿ ಕಲ್ಲೂರ್ ಹಾಗೂ ಪ್ರೊ. ವಿಜಯಲಕ್ಷ್ಮಿ ಕಲಾಲ್ ಅವರ ಬ್ಲಾಕ್‌ಚೈನ್ ಆಧಾರಿತ ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆ ವ್ಯವಸ್ಥೆಗೆ (Blockchain-based Electronic Health Record System) ಡಿಸೈನ್ ಪೇಟೆಂಟ್ ಮಂಜೂರಾಗಿದೆ. ಈ ವ್ಯವಸ್ಥೆಯು ರೋಗಿಗಳ ಆರೋಗ್ಯ ಮಾಹಿತಿಯನ್ನು ಸುರಕ್ಷಿತವಾಗಿ ಸಂಗ್ರಹಿಸುವುದರೊಂದಿಗೆ ಅನಧಿಕೃತ ಬದಲಾವಣೆಗಳನ್ನು ತಡೆಯುತ್ತದೆ. ವೈದ್ಯರ ನಡುವೆ ಆರೋಗ್ಯ ಮಾಹಿತಿಯ ಸುರಕ್ಷಿತ ವಿನಿಮಯಕ್ಕೆ ನೆರವಾಗುವುದರ ಜೊತೆಗೆ, ತುರ್ತು ಚಿಕಿತ್ಸೆಯ ಸಂದರ್ಭದಲ್ಲೂ ಅಗತ್ಯ ವೈದ್ಯಕೀಯ ಮಾಹಿತಿಯನ್ನು ತ್ವರಿತವಾಗಿ ಲಭ್ಯವಾಗುವಂತೆ ಮಾಡುತ್ತದೆ. ಈ ಡಿಸೈನ್ ಪೇಟೆಂಟ್‌ಗೆ 2025ರ ನವೆಂಬರ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಮಹಾವಿದ್ಯಾಲಯದ ಪ್ರಾಧ್ಯಾಪಕರ ಈ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ್ ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಡಿಐಟಿಯ ಏಳು ವಿಭಾಗಗಳು ವಿಟಿಯು (VTU) ಮಾನ್ಯತೆ ಪಡೆದ ಸಂಶೋಧನಾ ಕೇಂದ್ರಗಳಾಗಿದ್ದು, 17 ಪ್ರಾಧ್ಯಾಪಕರು ಸಂಶೋಧನಾ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ 26 ಸಂಶೋಧನಾ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನದಲ್ಲಿ ತೊಡಗಿದ್ದಾರೆ. ಇದುವರೆಗೆ 35 ಪೇಟೆಂಟ್‌ಗಳನ್ನು ಪ್ರಕಟಿಸಲಾಗಿದ್ದು, ಅವುಗಳಲ್ಲಿ ನಾಲ್ಕು ಪೇಟೆಂಟ್‌ಗಳಿಗೆ ಮಂಜೂರಾತಿ ದೊರೆತಿದೆ. ಇದು ಮಹಾವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಪ್ರಾಚಾರ್ಯ ಡಾ. ವಿ. ಎ. ಕುಲಕರ್ಣಿ ತಿಳಿಸಿದ್ದಾರೆ. ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ. ಮಹೇಂದ್ರ ದೀಕ್ಷಿತ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಕೆ. ಎಸ್. ಪೂಜಾರ್ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಪೇಟೆಂಟ್ ಪಡೆದ ಪ್ರಾಧ್ಯಾಪಕರನ್ನು ಅಭಿನಂದಿಸಿದ್ದಾರೆ.

Edited By :
Kshetra Samachara

Kshetra Samachara

01/08/2026 07:38 pm

Cinque Terre

8.36 K

Cinque Terre

0