ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ ಮಾರಿಜಾತ್ರೆ ಆಗಸ್ಟ್ 5–6: ಸಕಲ ಸಿದ್ಧತೆ ಪೂರ್ಣ; 25 ಸಾವಿರಕ್ಕೂ ಅಧಿಕ ಭಕ್ತರ ನಿರೀಕ್ಷೆ

ಭಟ್ಕಳ: ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಭಟ್ಕಳದ ಪ್ರಸಿದ್ಧ ಮಾರಿಜಾತ್ರೆಯು ಆಗಸ್ಟ್ 5 ಮತ್ತು 6ರಂದು ಭಕ್ತಿಭಾವದಿಂದ ನಡೆಯಲಿದ್ದು, ಜಾತ್ರೆಯ ಎಲ್ಲ ಸಿದ್ಧತೆಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಪೂರ್ಣಗೊಳಿಸಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಶ್ರೀಪಾದ ಕಂಚುಗಾರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಈ ಜಾತ್ರೆಯ ಅಂಗವಾಗಿ ಜುಲೈ 28ರಂದು ಅಮಟೆ ಮರದ ಮುಹೂರ್ತ ನೆರವೇರಿಸಿ, ಮಾರಿದೇವಿಯ ಮೂರ್ತಿ ಕೆತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

ವಂಶಪಾರಂಪರ್ಯವಾಗಿ ಮೂರ್ತಿ ನಿರ್ಮಾಣದ ಸೇವೆ ಸಲ್ಲಿಸುತ್ತಿರುವ ಮಣ್ಣುಳಿ ಆಚಾರ್ಯರ ಮನೆತನದಲ್ಲಿ ಆಗಸ್ಟ್ 4ರಂದು ಸಂಜೆ ಸುವಾಸಿನಿ ಪೂಜೆ ನಡೆಯಲಿದೆ. ಆಗಸ್ಟ್ 5ರಂದು ಆಚಾರ್ಯರ ಮನೆತನದಿಂದ ಮಾರಿದೇವಿಯ ಮೂರ್ತಿಯನ್ನು ದೇವಸ್ಥಾನದ ಆಡಳಿತ ಮಂಡಳಿಗೆ ವಿಧಿವತ್ತಾಗಿ ಹಸ್ತಾಂತರಿಸಲಾಗುತ್ತದೆ. ಬಳಿಕ ಮಣ್ಣುಳಿ ಮಾರಿ ತವರುಮನೆಯಿಂದ ರಘುನಾಥ ದೇವಸ್ಥಾನ, ಬಸ್ತಿ ರಸ್ತೆ ಹಾಗೂ ರಥಬೀದಿ ಮಾರ್ಗವಾಗಿ ಭಕ್ತಿಪೂರ್ವಕ ಮೆರವಣಿಗೆಯಲ್ಲಿ ಮೂರ್ತಿಯನ್ನು ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಬೆಳಿಗ್ಗೆ ಸುಮಾರು 5.30ಕ್ಕೆ ದೇವಸ್ಥಾನದ ಗದ್ದುಗೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ.

ಪ್ರತಿಷ್ಠೆಯ ಬಳಿಕ ಜೈನ್ ಸಮುದಾಯದ ಅರ್ಚಕರು ಪ್ರಥಮ ಪೂಜೆ ನೆರವೇರಿಸಲಿದ್ದು, ಎರಡು ದಿನಗಳ ಜಾತ್ರೆಯಲ್ಲಿ ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ, ಸರ್ವಸೇವೆ, ಕುಂಕುಮಾರ್ಚನೆ ಮತ್ತು ಮಹಾ ಆರತಿಯಲ್ಲಿ ಭಾಗವಹಿಸಲಿದ್ದಾರೆ.

ಆಗಸ್ಟ್ 6ರಂದು ಸಂಜೆ 4.30ಕ್ಕೆ ಮಹಾ ಪ್ರಾರ್ಥನೆ ಹಾಗೂ ವಿಸರ್ಜನಾ ಪೂಜೆ ನಡೆಯಲಿದೆ. ಬಳಿಕ ದೇವಸ್ಥಾನದಿಂದ ಮುಸ್ಬಾ ಕ್ರಾಸ್, ಹಳೆ ಬಸ್ ನಿಲ್ದಾಣ, ಬಂದರು ರಸ್ತೆ, ಹನುಮಾನನಗರ ಹಾಗೂ ಜಾಲಿಕೋಡಿ ಮಾರ್ಗವಾಗಿ ಸುಮಾರು 7 ಕಿ.ಮೀ. ಉದ್ದದ ಭವ್ಯ ವಿಸರ್ಜನಾ ಮೆರವಣಿಗೆ ಸಾಗಲಿದ್ದು, ಸಮುದ್ರ ತೀರದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಿಯ ವಿಸರ್ಜನೆ ನೆರವೇರಲಿದೆ. ಈ ಮೆರವಣಿಗೆಯಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ವರ್ಷದಿಂದ ಭಕ್ತರು ಹರಕೆ ರೂಪದಲ್ಲಿ ಸಮರ್ಪಿಸುವ ಹಣ್ಣುಕಾಯಿಗೆ ಕುಂಕುಮ ಹಚ್ಚುವ ಪದ್ಧತಿಯನ್ನು ಕೈಬಿಟ್ಟು, ಕುಂಕುಮ ಪ್ರಸಾದವನ್ನು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ವಿತರಿಸುವ ಹೊಸ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಗೆ ಭಕ್ತರು ಸಹಕರಿಸುವಂತೆ ದೇವಸ್ಥಾನ ಆಡಳಿತ ಮನವಿ ಮಾಡಿದೆ.

ಸಮುದ್ರ ತೀರದಲ್ಲಿ ನಡೆಯುವ ವಿಸರ್ಜನಾ ಪೂಜೆಯ ನಂತರದ ಧಾರ್ಮಿಕ ವಿಧಿವಿಧಾನಗಳು ಅತ್ಯಂತ ಪವಿತ್ರ ಹಾಗೂ ಸಂಪ್ರದಾಯಬದ್ಧವಾಗಿರುವ ಹಿನ್ನೆಲೆಯಲ್ಲಿ, ಆ ಸಂದರ್ಭದಲ್ಲಿ ಯಾವುದೇ ರೀತಿಯ ಫೋಟೋ, ವೀಡಿಯೊ ಅಥವಾ ಇತರೆ ಚಿತ್ರಿಕರಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಆಡಳಿತ ತಿಳಿಸಿದೆ.

ಜಾತ್ರೆಯ ಮೊದಲ ದಿನ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಹಾಗೂ ಎರಡನೇ ದಿನ ಬೆಳಿಗ್ಗೆ 6ರಿಂದ ಸಂಜೆ 4.30ರವರೆಗೆ ಭಕ್ತರಿಗೆ ದೇವಿಯ ದರ್ಶನ ಹಾಗೂ ವಿವಿಧ ಸೇವೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಪ್ರೀತಮ್ ಶೆಟ್, ಕೇಶವ ನಾಯ್ಕ, ಕೃಷ್ಣಾನಂದ ಮಹಾಲೆ, ದಿನೇಶ ನಾಯ್ಕ, ಸಂದೀಪ ಶೆಟ್, ಮಾದೇವ ಮೊಗೇರ ಹಾಗೂ ಜೀವೋತ್ತಮ ಪೈ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

01/08/2026 08:39 pm

Cinque Terre

2.08 K

Cinque Terre

0

ಸಂಬಂಧಿತ ಸುದ್ದಿ