ಅಣ್ಣಿಗೇರಿ: ಪ್ರಸ್ತುತ ಮುಂಗಾರು ಹಂಗಾಮಿನ ಹೆಸರು, ಉದ್ದು, ಹತ್ತಿ, ಸೋಯಾಬೀನ್ ಮತ್ತು ಶೇಂಗಾ (ನೆಲಗಡಲೆ) ಬೆಳೆಗಳು ಪ್ರಮುಖ ಬೆಳವಣಿಗೆಯ ಹಂತದಲ್ಲಿದ್ದು, ಕೀಟ ಮತ್ತು ರೋಗಬಾಧೆ ಕಂಡುಬರುವ ಸಾಧ್ಯತೆಯಿರುತ್ತದೆ. ಬೆಳೆಗಳಲ್ಲಿ ಯಾವುದೇ ರೋಗ ಅಥವಾ ಕೀಟಗಳ ಲಕ್ಷಣ ಕಂಡುಬಂದ ತಕ್ಷಣ ರೈತರು ವಿಳಂಬ ಮಾಡದೇ ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಅಣ್ಣಿಗೇರಿ ತಾಲೂಕಿನ ಕೃಷಿ ಅಧಿಕಾರಿ ವೀರಣ್ಣ ಗಡಾದ್ ಅವರು ತಿಳಿಸಿದ್ದಾರೆ.
ಬೆಳೆವಾರು ಕೀಟ ಮತ್ತು ರೋಗ ನಿರ್ವಹಣಾ ಕ್ರಮಗಳು:
1. ಹೆಸರು ಮತ್ತು ಉದ್ದು (50 ರಿಂದ 55 ದಿನಗಳ ಬೆಳೆ)
ಕೀಟಬಾಧೆ: ಎಲೆ ತಿನ್ನುವ ಹುಳು, ಕೊಂಬಿನ ಹುಳು ಹಾಗೂ ಕಪ್ಪು ಮೂತಿ ಹುಳುವಿನ ಬಾಧೆ. ಎಲೆ ತಿನ್ನುವ & ಕಪ್ಪು ಮೂತಿ ಹುಳು ಹತೋಟಿಗೆ: ೨ ಮಿ.ಲೀ. ಕ್ವಿನಾಲ್ ಫಾಸ್ ೨೫ ಇ.ಸಿ. ಅಥವಾ ೦.೨ ಮಿ.ಲೀ. ಕ್ಲೋರಂಟ್ರನಿಲಿಪ್ರೋಲ್ ಶೇ. ೧೮.೫ ಎಸ್.ಸಿ. ಅಥವಾ ೦.೫ ಮಿ.ಲೀ. ಫೆನ್ ವಲರೇಟ್ ೨೦ ಇ.ಸಿ. (ಪ್ರತಿ ಲೀ ನೀರಿಗೆ).
ಕೊಂಬಿನ ಹುಳು ಹತೋಟಿಗೆ: ೪ ಗ್ರಾಂ ಕಾರ್ಬರಿಲ್ ೫೦ ಡಬ್ಲ್ಯು.ಪಿ. ಅಥವಾ ೨ ಮಿ.ಲೀ. ಕ್ಲೋರ್‌ಪೈರಿಫಾಸ್ ೨೦ ಇ.ಸಿ. ಬೆರೆಸಿ ಸಿಂಪಡಿಸಬೇಕು.
ರೋಗಬಾಧೆ (ಹಳದಿ ನಂಜು ರೋಗ - Yellow Mosaic & ಬೂದಿ ರೋಗ - Powdery Mildew):
ಹಳದಿ ನಂಜು ರೋಗ: ಬಿಳಿ ನೊಣದಿಂದ ಹರಡುವ ಈ ರೋಗದ ಹತೋಟಿಗೆ ೦.೩ ಮಿ.ಲೀ. ಇಮಿಡಾಕ್ಲೋಪ್ರಿಡ್ ೧೭.೮ ಎಸ್.ಎಲ್. ಸಿಂಪಡಿಸಬೇಕು.
ಬೂದಿ ರೋಗ: ಎಲೆಗಳ ಮೇಲೆ ಬಿಳಿ ಬೂದಿ ತರಹದ ಪದರ ಕಂಡುಬಂದರೆ ೧ ಮಿ.ಲೀ. ಹೆಕ್ಸಾಕೊನಝೋಲ್ ೫ ಇ.ಸಿ. ಅಥವಾ ೩ ಗ್ರಾಂ ಕರಗುವ ಗಂಧಕ (Sulphur) ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
2. ಹತ್ತಿ ಬೆಳೆ ಕೀಟಬಾಧೆ: ರಸ ಹೀರುವ ಕೀಟಗಳು (ಜಿಗಿಹುಳು, ಹೇನು, ನುಸಿ) ಹಾಗೂ ಕಾಯಿಕೋರಕ ಹುಳುಗಳು.
ರಸ ಹೀರುವ ಕೀಟಗಳಿಗೆ: ೦.೩ ಮಿ.ಲೀ. ಇಮಿಡಾಕ್ಲೋಪ್ರಿಡ್ ೧೭.೮ ಎಸ್.ಎಲ್. ಅಥವಾ ೦.೨ ಗ್ರಾಂ ಅಸಿಟಾಮಿಪ್ರಿಡ್ ೨೦ ಎಸ್.ಪಿ. (ಪ್ರತಿ ಲೀ ನೀರಿಗೆ).ಕಾಯಿಕೋರಕಗಳಿಗೆ: ೨ ಮಿ.ಲೀ. ಪ್ರೊಫೆನೋಫಾಸ್ ೫೦ ಇ.ಸಿ. ಸಿಂಪಡಿಸಬೇಕು.
ರೋಗಬಾಧೆ (ಎಲೆ ಚುಕ್ಕೆ ರೋಗ & ಬೆಂಕಿರೋಗ - Alternaria Leaf Spot / Bacterial Blight): ಎಲೆಗಳ ಮೇಲೆ ಆಕಾರವಿಲ್ಲದ ಕಂದು ಚುಕ್ಕೆಗಳು ಅಥವಾ ಒಣಗುವ ಲಕ್ಷಣಗಳು ಕಂಡುಬರುತ್ತವೆ.ಹತೋಟಿ (ಪ್ರತಿ ಲೀಟರ್ ನೀರಿಗೆ): ೨ ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ ೫೦ ಡಬ್ಲ್ಯು.ಪಿ. ಜೊತೆಗೆ ೦.೦೫ ಗ್ರಾಂ ಸ್ಟ್ರೆಪ್ಟೋಸೈಕ್ಲಿನ್ ಬೆರೆಸಿ ಸಿಂಪಡಿಸಬೇಕು.
3. ಶೇಂಗಾ / ನೆಲಗಡಲೆ ಬೆಳೆ
ಕೀಟಬಾಧೆ: ಎಲೆ ಸುರುಳಿ ಸುತ್ತುವ ಹುಳು ಹಾಗೂ ಎಲೆ ತಿನ್ನುವ ಕಾಯಿ ಕೊರಕ.ಹತೋಟಿ (ಪ್ರತಿ ಲೀಟರ್ ನೀರಿಗೆ): ೨ ಮಿ.ಲೀ. ಕ್ವಿನಾಲ್ ಫಾಸ್ ೨೫ ಇ.ಸಿ. ಅಥವಾ ೦.೫ ಮಿ.ಲೀ. ಲ್ಯಾಂಬ್ಡಾಸೈಲೋಥ್ರಿನ್ ೫ ಇ.ಸಿ. ಬೆರೆಸಿ ಸಿಂಪಡಿಸಬೇಕು.
ರೋಗಬಾಧೆ (ಟಿಕ್ಕಾ ಎಲೆ ಚುಕ್ಕೆ ರೋಗ - Tikka Leaf Spot & ತುಕ್ಕು ರೋಗ - Rust): ಎಲೆಗಳ ಮೇಲೆ ಕಪ್ಪು/ಕಂದು ಚುಕ್ಕೆಗಳು ಕಂಡುಬಂದು ಎಲೆಗಳು ಉದುರುತ್ತವೆ.
ಹತೋಟಿ (ಪ್ರತಿ ಲೀಟರ್ ನೀರಿಗೆ): ೨ ಗ್ರಾಂ ಮ್ಯಾಂಕೋಝೆಬ್ ೭೫ ಡಬ್ಲ್ಯು.ಪಿ. ಅಥವಾ ೨ ಗ್ರಾಂ ಹೆಕ್ಸಾಕೊನಝೋಲ್ + ಝಿನೆಬ್ ಮಿಶ್ರಣ (ಅಥವಾ ಕಾರ್ಬಂಡಝಿಮ್ + ಮ್ಯಾಂಕೋಝೆಬ್ ೨ ಗ್ರಾಂ) ಬೆರೆಸಿ ಸಿಂಪಡಿಸಬೇಕು.
4. ಸೋಯಾಬೀನ್ (40 ರಿಂದ 45 ದಿನಗಳ ಬೆಳೆ)
ಕೀಟಬಾಧೆ: ಸ್ಪೋಡಾಪ್ಟೆರಾ ಮತ್ತು ಹೆಲಿಕೋವರ್ಪಾ ಕೀಟಗಳು ಎಲೆಗಳನ್ನು ತಿಂದು ಹಾನಿ ಮಾಡುತ್ತವೆ.
ಹತೋಟಿ (ಪ್ರತಿ ಲೀಟರ್ ನೀರಿಗೆ): ೨ ಮಿ.ಲೀ. ಕ್ವಿನಾಲ್ ಫಾಸ್ ೨೫ ಇ.ಸಿ. ಅಥವಾ ೦.೫ ಮಿ.ಲೀ. ಲ್ಯಾಂಬ್ಡಾಸೈಲೋಥ್ರಿನ್ ೫ ಇ.ಸಿ. ಅಥವಾ ೦.೩ ಗ್ರಾಂ ಇಮಾಮೆಕ್ಟಿನ್ ಬೆಂಜೋಯಿಟ್ ೫ ಎಸ್.ಜಿ. ಅಥವಾ ೦.೪ ಮಿ.ಲೀ.ಕ್ಲೋರಂಟ್ರನಿಲಿಪ್ರೋಲ್ ಶೇ. ೧೮.೫ ಎಸ್.ಸಿ. ಬೆರೆಸಿ ಸಿಂಪಡಿಸಬೇಕು.
ರೋಗಬಾಧೆ (ತುಕ್ಕು ರೋಗ - Rust / ಎಲೆ ಚುಕ್ಕೆ ರೋಗ): ಎಲೆಗಳ ಮೇಲೆ ಕಂದು/ಹಳದಿ ಚುಕ್ಕೆಗಳು ಕಂಡುಬರುತ್ತವೆ.
ಹತೋಟಿ (ಪ್ರತಿ ಲೀಟರ್ ನೀರಿಗೆ): ೧ ಗ್ರಾಂ ಕಾರ್ಬಂಡಝಿಮ್ ೫೦ ಡಬ್ಲ್ಯು.ಪಿ. ಅಥವಾ ೨ ಗ್ರಾಂ ಮ್ಯಾಂಕೋಝೆಬ್ ೭೫ ಡಬ್ಲ್ಯು.ಪಿ. ಬೆರೆಸಿ ಸಿಂಪಡಿಸಬೇಕು.
ಪರಿಸರ ಸ್ನೇಹಿ ಕೃಷಿ ಮತ್ತು ಜೈವಿಕ ನಿರ್ವಹಣೆಗೆ ವಿಶೇಷ ಮನವಿ:
ಕೇವಲ ರಾಸಾಯನಿಕ ಕ್ರಿಮಿನಾಶಕಗಳನ್ನೇ ಅವಲಂಬಿಸದೇ, ರೈತರು ವೆಚ್ಚ ಕಡಿಮೆ ಮಾಡಲು ಹಾಗೂ ಮಣ್ಣಿನ ಆರೋಗ್ಯ ಕಾಪಾಡಲು ಸಾಧ್ಯವಿರುವ ಸಗ್ರಹ ಕೀಟ ನಿರ್ವಹಣೆ (IPM) ಕ್ರಮಗಳನ್ನು ಅಳವಡಿಸಿಕೊಳ್ಳಬೇಕು:
ಹಳದಿ ಮತ್ತು ನೀಲಿ ಬಣ್ಣದ ಅಂಟಿನ ಬಲೆಗಳು (Yellow/Blue Sticky Traps): ರಸ ಹೀರುವ ಕೀಟಗಳು ಮತ್ತು ಬಿಳಿ ನೊಣಗಳನ್ನು ಆಕರ್ಷಿಸಿ ನಾಶಪಡಿಸಲು ಎಕರೆಗೆ ೮-೧೦ ಬಲೆಗಳನ್ನು ಅಳವಡಿಸಬೇಕು.
ಮೋಹಕ ಬಲೆಗಳು (Pheromone Traps): ಹತ್ತಿ, ಸೋಯಾಬೀನ್ ಮತ್ತು ಶೇಂಗಾ ಬೆಳೆಗಳಲ್ಲಿ ಕಾಯಿಕೋರಕ ಹಾಗೂ ಸ್ಪೋಡಾಪ್ಟೆರಾ ಪತಂಗಗಳ ಸಮೀಕ್ಷೆ ಮತ್ತು ಹತೋಟಿಗೆ ಎಕರೆಗೆ ೪-೫ ಫೆರೋಮೋನ್ ಬಲೆಗಳನ್ನು ಇಡಬೇಕು.
ಜೈವಿಕ ಪೀಡೆನಾಶಕ ಬಳಕೆ: ಆರಂಭಿಕ ಹಂತದಲ್ಲಿ ಬೇವಿನ ಎಣ್ಣೆ (Neem Oil 1500 ppm - 3 to 5ml/liter) ಅಥವಾ ಟ್ರೈಕೋಡರ್ಮಾ/ಬೆವೇರಿಯಾ ಬಾಸಿಯಾನಾ ಜೈವಿಕ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವುದರಿಂದ ಕೀಟ ಹಾಗೂ ರೋಗಗಳನ್ನು ಪ್ರಾಕೃತಿಕವಾಗಿ ತಡೆಯಬಹುದು.
ಉತ್ತಮ ಬೇಸಾಯ ಕ್ರಮಗಳು (Agronomic Practices): ಜಮೀನಿನಲ್ಲಿ ನೀರು ನಿಲ್ಲದಂತೆ ಸೂಕ್ತ ಬಸಿಕಾಲುವೆ ಮಾಡುವುದು, ಕಳೆಗಳನ್ನು ಸಕಾಲದಲ್ಲಿ ತೆಗೆದು ಹೊಲವನ್ನು ಸ್ವಚ್ಛವಾಗಿಡುವುದು ಹಾಗೂ ಪಕ್ಷಿ ಕುಳಿತುಕೊಳ್ಳುವ ಚೌಕಟ್ಟುಗಳನ್ನು (Bird Perches) ನಿರ್ಮಿಸುವುದು ಅತ್ಯಗತ್ಯ.
Kshetra Samachara
02/08/2026 11:13 am