ಹುಬ್ಬಳ್ಳಿ : ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ನಾಯಿಗಳ ಓಡಾಟ ಮತ್ತು ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಹುಬ್ಬಳ್ಳಿಯ ಬಸ್ ನಿಲ್ದಾಣ, ಮಾರುಕಟ್ಟೆ, ರೈಲ್ವೇ ನಿಲ್ದಾಣ ಹಾಗೂ ನಗರದ ಪ್ರತಿಯೊಂದು ಬೀದಿ-ಬೀದಿಗಳಲ್ಲೂ ನಾಯಿಗಳ ಹಿಂಡು ಓಡಾಡುತ್ತಿರುವುದು ಸಾಮಾನ್ಯವಾಗಿದೆ. ಮುಖ್ಯವಾಗಿ ಶಾಲೆ, ಕಾಲೇಜು ಹಾಗೂ ಆಸ್ಪತ್ರೆಗಳ ಆವರಣಗಳ ಬಳಿಯೂ ನಾಯಿಗಳ ಹಾವಳಿ ತೀವ್ರಗೊಂಡಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ನ್ಯಾಯಪೀಠವು ನಾಯಿ ಕಡಿತದ ಘಟನೆಗಳು ಆತಂಕಕಾರಿಯಾಗಿ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿತ್ತು. ಸಾರ್ವಜನಿಕ ಸುರಕ್ಷತೆ ಮತ್ತು ಪ್ರಾಣಿ ಕಲ್ಯಾಣ ಎರಡನ್ನೂ ಸಮತೋಲನಗೊಳಿಸಿ ಮಹತ್ವದ ಆದೇಶ ನೀಡಿದ್ದ ನ್ಯಾಯಾಲಯ, "ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬ ನಾಗರಿಕನಿಗೂ ನಾಯಿ ಕಡಿತದ ಭಯವಿಲ್ಲದೆ ಮುಕ್ತವಾಗಿ ಸಂಚರಿಸುವ ಹಕ್ಕಿದೆ" ಎಂದು ಸ್ಪಷ್ಟಪಡಿಸಿತ್ತು.
ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಹಾಗೂ ರೇಬೀಸ್ ಲಸಿಕೆ ನೀಡಿದ ನಂತರ, ಅವುಗಳನ್ನು ಮತ್ತೆ ಅದೇ ಹಳೆಯ ಜಾಗಕ್ಕೆ ಬಿಡದೆ ನಿಯೋಜಿತ ಆಶ್ರಯ ತಾಣಗಳಿಗೆ (Dog Shelters) ಸ್ಥಳಾಂತರಿಸಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ.
ಇಷ್ಟೆಲ್ಲಾ ನಿಯಮಗಳನ್ನು ಸರ್ವೋಚ್ಚ ನ್ಯಾಯಾಲಯ ರೂಪಿಸಿದ್ದರೂ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾತ್ರ ಈ ಆದೇಶವನ್ನು ಸರಿಯಾಗಿ ಜಾರಿಗೊಳಿಸದೆ ಜಾಣಕುರುಡು ಪ್ರದರ್ಶಿಸುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/08/2026 07:22 pm